ಕಲಬುರಗಿ: ನಗರದ ಹೃದಯಭಾಗವಾದ ಜಗತ್ ವೃತ್ತದಲ್ಲಿ ಸಾರ್ವಜನಿಕರು ಬೆಚ್ಚಿಬೀಳುವಂತಹ ಘಟನೆಯೊಂದು ಸಂಭವಿಸಿದೆ. ಕರ್ತವ್ಯ ನಿರತರಾಗಿದ್ದ ಪೊಲೀಸ್ ಪೇದೆಯೊಬ್ಬರು ತಮಗೆ ನೀಡಲಾಗಿದ್ದ ಸರ್ಕಾರಿ ರೈಫಲ್‌ನಿಂದಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯನ್ನು ಕಲಬುರಗಿ ನಗರ ಸಶಸ್ತ್ರ ಮೀಸಲು ಪಡೆಯ (CAR) ಪೇದೆ ಶಿವಕುಮಾರ್ ಮಾವನೂರ್ (32) ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಕಲಬುರಗಿ ನಗರಕ್ಕೆ ವರ್ಗಾವಣೆಯಾಗಿ ಬಂದು ಕರ್ತವ್ಯಕ್ಕೆ ಹಾಜರಾಗಿದ್ದರು.
ಶಿವಕುಮಾರ್ ಅವರು ಕರ್ತವ್ಯದ ಅವಧಿಯಲ್ಲಿ ಪೊಲೀಸ್ ವಾಹನದಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದೆ. ವಾಹನದ ಒಳಗಡೆಯೇ ತಮ್ಮ ಬಳಿಯಿದ್ದ ಸರ್ಕಾರಿ ರೈಫಲ್ ತೆಗೆದುಕೊಂಡು ಶೂಟ್ ಮಾಡಿಕೊಂಡಿದ್ದಾರೆ. ಗುಂಡು ಹಾರಿದ ಶಬ್ದ ಕೇಳಿ ಸಹೋದ್ಯೋಗಿಗಳು ಓಡಿ ಬರುವಷ್ಟರಲ್ಲೇ ಅವರು ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ.

ಘಟನೆ ನಡೆದ ತಕ್ಷಣ ಜಗತ್ ವೃತ್ತದ ಬಳಿ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಉಪ ಪೊಲೀಸ್ ಆಯುಕ್ತರಾದ (DCP) ಶಾಲೂ ಉದ್ಯೋಗ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹೆತ್ತವರನ್ನೇ ಕೊಂದ ಕಟುಕರಿಂದ ಸತ್ಯ ಕಕ್ಕಿಸಲು ಖಾಕಿ ಪ್ಲಾನ್: ಹಂತಕರಿಗೆ ನಾರ್ಕೋ ಅನಾಲಿಸಿಸ್ ಟೆಸ್ಟ್!
