Connect with us

BELAKU

ಬರಗಾಲದಲ್ಲೂ ಸಿಹಿ ನೀರು ನೀಡುವ ಬಾವಿಯ ಜೀರ್ಣೋದ್ಧಾರೆಕ್ಕೆ ಬೇಕಿದೆ ಸಹಾಯ

Published

on

ರಾಯಚೂರು: ಜಿಲ್ಲೆಯ ಗ್ರಾಮದಲ್ಲೊಂದು ದೊಡ್ಡ ಬಾವಿಯಿದೆ. ಎಂತಹ ಬೇಸಿಗೆ ಬರಗಾಲ ಬಂದ್ರೂ ಈ ಬಾವಿ ಮಾತ್ರ ಬತ್ತಿ ಹೋಗಲ್ಲ. ಅಲ್ಲದೆ ಇಲ್ಲಿನ ನೀರು ಅಮೃತಕ್ಕೆ ಸಮ ಅಂತಲೇ ಜನ ನಂಬಿದ್ದಾರೆ. ಹೀಗಾಗಿ ಈ ಬಾವಿಯನ್ನ ಸಿಹಿನೀರ ಬಾವಿ ಅಂತ ಕರೆಯುತ್ತಾರೆ. ಆದ್ರೆ ದುರಂತ ಅಂದ್ರೆ ಈ ಬಾವಿಯ ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳಲು ಮಾತ್ರ ಈವರೆಗೂ ಸಾಧ್ಯವಾಗುತ್ತಿಲ್ಲ. ನೂರಾರು ಲೀಟರ್ ಶುದ್ಧ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿದೆ. ಬಾವಿಯಿದ್ರೂ ರಾಯಚೂರಿನ ಯರಮರಸ್ ಗ್ರಾಮದ ಜನ ನೀರಿಗಾಗಿ ಕಷ್ಟಪಡುತ್ತಿದ್ದಾರೆ.

ನೂರಾರು ವರ್ಷಗಳಷ್ಟು ಹಳೆದಾದ ಈ ಬಾವಿಯಲ್ಲಿ ಎಂತಹ ಭೀಕರ ಬರಗಾಲವಿದ್ದರೂ ಸಿಹಿ ನೀರು ಉಕ್ಕಿ ಬರುತ್ತದೆ. ಆದ್ರೆ ಸರಿಯಾದ ವ್ಯವಸ್ಥೆಗಳಿಲ್ಲದೆ ಈ ಸಿಹಿ ನೀರಿನ ಬಾವಿಯನ್ನ ಸದ್ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಸುಮಾರು ಐದು ಸಾವಿರ ಜನಸಂಖ್ಯೆಯ ಯರಮರಸ್ ಗ್ರಾಮದ ಜನ ಮೂರು ದಿನಕ್ಕೆ ಒಮ್ಮೆ ನಗರಸಭೆ ಬಿಡುವ ಕೃಷ್ಣಾ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಈ ಬಾವಿಯ ನೀರು ಮಾತ್ರ ಚರಂಡಿಗೆ ಹರಿದು ಪೋಲಾಗುತ್ತಿದೆ. ಗ್ರಾಮದ ಯುವಕರು ಬಾವಿಯಲ್ಲಿ ಈಜಾಡಿ ನೀರನ್ನ ಮಲೀನ ಮಾಡುತ್ತಾರೆ ಅಂತ ನೀರನ್ನ ಚರಂಡಿಗೆ ಹರಿಸಲಾಗುತ್ತಿದೆ. ನಿರ್ವಹಣೆ ಇಲ್ಲದೆ ಈ ಹಿಂದೆ ಬಾವಿಯ ಗೋಡೆ ಕುಸಿದು ಬಿದ್ದಿತ್ತು, ನಗರಸಭೆ ಗೋಡೆಯನ್ನ ಕಟ್ಟಿದ ಬಳಿಕವೂ ನಿರ್ವಹಣೆ ಶೂನ್ಯವಾಗಿದೆ.

ಬೇಸಿಗೆಯಲ್ಲಿ ನದಿ ನೀರು ಬತ್ತಿದಾಗ ಈ ಗ್ರಾಮದ ಜನ ನೀರಿದ್ದರೂ, ನೀರಿಗಾಗಿ ಎಲ್ಲರಂತೆ ಪರದಾಡುತ್ತಿದ್ದಾರೆ. ಬಾವಿಗೆ ರಕ್ಷಣಾ ಗೋಡೆ ಕಟ್ಟಿ, ಇಲ್ಲಿನ ನೀರನ್ನ ಪಂಪ್ ಸೆಟ್ ಮೂಲಕ ಕುಡಿಯುವ ನೀರಿನ ಪೈಪ್ ಲೈನ್‍ಗೆ ಅಳವಡಿಸಿದರೆ ಇಡೀ ಗ್ರಾಮಕ್ಕೆ ನಿತ್ಯ ನೀರು ಸರಬರಾಜು ಮಾಡಬಹುದು. ಅಲ್ಲದೆ ಈ ಗ್ರಾಮಕ್ಕೆ ಬಳಕೆಯಾಗುತ್ತಿರುವ ಕೃಷ್ಣಾನದಿ ನೀರನ್ನ ಅಕ್ಕಪಕ್ಕದ ಗ್ರಾಮಕ್ಕೆ ನೀಡಬಹುದು. ಸಿಹಿ ನೀರು ಬಾವಿಯನ್ನ ಸದ್ಬಳಕೆ ಮಾಡಿಕೊಂಡರೆ ಯರಮರಸ್ ಮಾತ್ರವಲ್ಲದೆ ಅಕ್ಕಪಕ್ಕದ ನಾಲ್ಕೈದು ಗ್ರಾಮಗಳ ನೀರಿನ ಸಮಸ್ಯೆ ನೀಗಲಿದೆ. ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಜೊತೆ ಕೈ ಜೋಡಿಸಿ ಬಾವಿಯ ಜೀಣೋದ್ದಾರಕ್ಕೆ ರಾಯಚೂರು ನಗರಸಭೆ ಈಗ ಮುಂದೆ ಬಂದಿದೆ.

ಒಟ್ಟಿನಲ್ಲಿ, ನೀರಿನ ಮೂಲವೇ ಇಲ್ಲದೆ ಕುಡಿಯುವ ನೀರಿಗಾಗಿ ಪರದಾಡುವ ಗ್ರಾಮಗಳ ಪರಸ್ಥಿತಿ ಒಂದೆಡೆಯಾದ್ರೆ, ಇಲ್ಲಿ ಅಮೃತದಂತ ನೀರಿದ್ದರೂ ಬಳಸಿಕೊಳ್ಳಲಾಗದ ಸ್ಥಿತಿ ಬಂದಿರುವುದು ನಿಜಕ್ಕೂ ದುರಂತ. ಕೊನೆಗೂ ನಗರಸಭೆ ಬಾವಿಯ ದುರಸ್ಥಿ ಹಾಗೂ ಪೈಪ್ ಲೈನ್ ಅಳವಡಿಕೆಗೆ ಮನಸ್ಸು ಮಾಡಿರುವುದು ಉತ್ತಮ ಬೆಳವಣಿಗೆ, ಈ ಮೂಲಕ ಸುತ್ತಮುತ್ತಲ ಗ್ರಾಮಗಳ ಜನರ ನೀರಿನ ಸಮಸ್ಯೆ ನೀಗಿಸುವುದೇ ಬೆಳಕು ಕಾರ್ಯಕ್ರಮದ ಉದ್ದೇಶ.

https://www.youtube.com/watch?v=ezr2AGXrgyE

Click to comment

Leave a Reply

Your email address will not be published. Required fields are marked *