– ಒಟ್ಟಿಗೆ ದುಡಿದು, ಓದಿ, ಕನಸು ಕಂಡವರ ಬದುಕಿನ ದುರಂತ ಅಂತ್ಯ
ತಿರುವನಂತಪುರಂ: ಗಂಟೆ ರಾತ್ರಿ ಹತ್ತಾಗಿತ್ತು (ಶನಿವಾರ), ಗೋಪಿಕಾ ನನ್ನ ತಂದೆಗೆ ಕರೆ ಮಾಡಿ ಟೀ (Tea) ಕುಡಿಯಲು ಹೊರಗೆ ಹೋಗುತ್ತಿರೋದಾಗಿ ಹೇಳಿದ್ಲು. ಸಹಜವಾಗಿಯೇ ನಡೆದಿದ್ದ ಆ ಮಾತುಕತೆ ಆ ಕುಟುಂಬದ ಪಾಲಿಕೆ ಮರೆಯಲಾಗದ ನೆನಪಾಯಿಗೇ ಉಳಿಯಿತು. ಒಟ್ಟಿಗೆ ದುಡಿದು, ಓದಿ, ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದವರ ಬದುಕು ದುರಂತ ಅಂತ್ಯ ಕಂಡಿತು.
ಹೌದು. ಭಾನುವಾರ ನಸುಕಿನ ಜಾವ ನೆಡುಂಬಾಶ್ಶೇರಿಯ (Nedumbassery) ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಅಪಘಾತದಲ್ಲಿ 22 ವರ್ಷದ ಗೋಪಿಕಾ, ಆಕೆಯ ಸ್ನೇಹಿತರಾದ 21 ವರ್ಷದ ಇಯಾಸ್ ಹಾಗೂ 21 ವರ್ಷದ ದೇವಿಕಾ ಮೃತಪಟ್ಟರು. ಅಪಘಾತದಲ್ಲಿ ಮೃತಪಟ್ಟ ಮೊಹಮ್ಮದ್ ಇಯಾಸ್ (21), ಕೊಡಗು ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲು ಸುಣ್ಣಮೂಲೆಯ ನಿವಾಸಿ ಎಂದು ತಿಳಿದುಬಂದಿದೆ.
ಮುಳುಗಿತು ಕನಸಿನ ದೋಣಿ
ಒಬ್ಬರಿಗೊಬ್ಬರು ಆತ್ಮೀಯರಾಗಿದ್ದ ಮೂವರು ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ತ್ರಿಕ್ಕಾಕರದಲ್ಲಿರುವ ಪುರಾತನ ವಸ್ತುಗಳ ಅಂಗಡಿಯಲ್ಲಿ ಒಟ್ಟಿಗೆ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದರು. ಇದರ ಮಧ್ಯೆ ಎರ್ನಾಕುಲಂನಲ್ಲಿ 6 ತಿಂಗಳ ಅಕೌಂಟಿಂಗ್ ಕೋರ್ಸ್ಗೂ ಸೇರಿಕೊಂಡಿದ್ದರು. ಕೆಲಸದೊಂದಿಗೆ ವಿದ್ಯಾಭ್ಯಾಸ ಮಾಡುತ್ತಾ, ತಮ್ಮದೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದ್ರೆ ಭಾನುವಾರ ಸೂರ್ಯೋದಯಕ್ಕೂ ಮುನ್ನವೇ ಆ ಕನಸಿನ ದೋಣಿ ದಿಢೀರ್ ಮುಳುಗಿ ಹೋಯಿತು.

ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ರಸ್ತೆಯ ಮೂಳಿಯಾಲ್ ಬಳಿ ವೇಗವಾಗಿ ಬಂದ ಕಾರೊಂದು ಅವರು ಪ್ರಯಾಣಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆಯಿತು. ಮೂವರ ಕನಸುಗಳ ಪಯಣ ಅಲ್ಲಿಯೇ ಕೊನೆಗೊಂಡಿತು.
ಮೊಹಮ್ಮದ್ ಇಯಾಸ್ ಕೊಡಗಿನ ಮೂಲದವರು
ಅಪಘಾತದಲ್ಲಿ ಮೃಥಪಟ್ಟ ಮೂವರ ಪೈಕಿ ಮೊಹಮ್ಮದ್ ಇಯಾಸ್ ಕರ್ನಾಟಕದ ಕೊಡಗು ಮೂಲದವರು. ಗೋಪಿಕಾ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್ ನಿವಾಸಿಯಾದರೆ, ದೇವಿಕಾ ವಯನಾಡಿನವರು. ತಮ್ಮ ಮನೆಗಳಿಂದ ದೂರದಲ್ಲಿದ್ದ ಮೂವರು ಒಂದೇ ಸ್ಥಳದಲ್ಲಿ ಕೆಲಸ ಮಾಡಿಕೊಂಡಿದ್ದರು. ದಿನನಿತ್ಯದ ಬದುಕಿನ ಸಣ್ಣಪುಟ್ಟ ಸಂತೋಷ, ಕಷ್ಟಗಳು ಹಾಗೂ ಭವಿಷ್ಯದ ಕನಸುಗಳನ್ನ ಹಂಚಿಕೊಂಡು ಆತ್ಮೀಯರಾಗಿದ್ದರು. ಆದ್ರೆ ಅದೊಂದು ಅಪಘಾತ ಮೂವರ ಬದುಕಿನ ದಾರಿಯನ್ನೇ ಮುಗಿಸಿಬಿಟ್ಟಿತು.
ಟೀ ಬ್ರೇಕ್ ಮುಗಿಸಿಕೊಂಡು ಹೊರಟಾಗ…
ಇನ್ನೂ ಅಪಘಾತದ ಕುರಿತು ಮಾತನಾಡಿದ ಸಹೋದ್ಯೋಗಿ ಪ್ರಿಯದ್, ಮೂವರನ್ನ ಕಳೆದುಕೊಂಡ ನೋವು ತಮ್ಮ ಪಾಲಿಗೆ ಆಳವಾಗಿದೆ. ಕೆಲಸದ ಸ್ಥಳದಲ್ಲಿ ಮೂವರೂ ಎಲ್ಲರೊಂದಿಗೆ ಆತ್ಮೀಯರಾಗಿದ್ದರು. ಟೀ ಬ್ರೇಕ್ ಮುಗಿಸಿಕೊಂಡು ನಾವು ಕೆಲಸಕ್ಕೆ ಹಿಂದಿರುಗುತ್ತಿದ್ದೆವು. ಮೂರು ದ್ವಿಚಕ್ರ ವಾಹನಗಳಲ್ಲಿ ಹೋಗಿದ್ದೆವು. ನಾನು ಕೊನೆಯಲ್ಲಿದ್ದೆ, ಮೃತ ಮೂವರು ನಮ್ಮ ಮುಂದಿದ್ದ ಸ್ಕೂಟರ್ನಲ್ಲಿದ್ದರು. ಆಗ ಕಾರೊಂದು ನನ್ನನ್ನ ಓವರ್ಟೇಕ್ ಮಾಡಿ ವೇಗವಾಗಿ ಮುಂದೆ ಸಾಗಿತು. ಕೆಲವೇ ಕ್ಷಣಗಳಲ್ಲಿ ಅಪಘಾತ ನಡೆದಿತ್ತು ಎಂದು ನೆನಪಿಸಿಕೊಂಡರು.

ಏಫ್ಐಆರ್ನಲ್ಲಿ ಏನಿದೆ?
ನೆಡುಂಬಾಶ್ಶೇರಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರಕಾರ, ರಾತ್ರಿ ಸುಮಾರು 1.45 ರ ವೇಳೆಗೆ ಪಘಾತ ಸಂಭವಿಸಿದೆ. ಆರೋಪಿ ಸುಹೈಲ್ ಸಜೀವ್ ಚಲಾಯಿಸುತ್ತಿದ್ದ ಮಿನಿ ಕೂಪರ್ ಕಾರು ವೇಗವಾಗಿ ಬಂದು ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರೂ ರಸ್ತೆಗೆ ಅಪ್ಪಳಿಸಿದ್ದು, ಗಂಭೀರ ಗಾಯಗೊಂಡಿದ್ದರು, ಇಯಾಸ್ ಮತ್ತು ದೇವಿಕಾರನ್ನ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗೋಪಿಕಾರನ್ನ ಅಂಗಮಾಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂವರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಘಟನೆ ಬಳಿಕ ಸ್ಥಳೀಯರು ಸುಹೈಲ್ನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ;ಒಲೀಸರು ಆತನನ್ನ ಬಂಧಿಸಿದ್ದಾರೆ. ಇನ್ನೂ ಪೊಲೀಸರಿಗೊಪ್ಪಿಸಿದರೂ ಧಿಮಾಕಿನ ಮಾತುಗಳನ್ನಾಡಿದ್ದಾನೆ. ಏನೇ ಆದ್ರೂ ನನ್ನ ಕುಟುಂಬ ನೋಡಿಕೊಳ್ಳುತ್ತೆ ಎಂದು ಆರೋಪಿ ಸುಹೈಲ್ ಧಿಮಾಕು ತೋರಿದ್ದಾನೆ.
ಅಮ್ಮ ಕೊಟ್ಟ ಗಿಫ್ಟ್ ಕೂಪರ್ ಕಾರು
ಆರೋಪಿ ಸುಹೈಲ್ಗೆ ಆತನ ಹುಟ್ಟುಹಬ್ಬದಂದು ಅಮ್ಮ ಕಾರನ್ನ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕೂಡ ಹಂಚಿಕೊಂಡಿದ್ದರು. ಸಂಭ್ರಮದ ಕ್ಷಣದಲ್ಲಿ ಉಡುಗೊರೆಯಾಗಿ ಬಂದ ಅದೇ ಕಾರು ಬಳಿಕ ನಡೆದ ದುರಂತದಲ್ಲಿ ಮೂವರ ಜೀವ ಕಸಿದಿರುವುದು ಈಗ ಚರ್ಚಾಸ್ಪದವಾಗಿದೆ.

