– ಚೀನಾದ ಯೋಜನೆಗಳಿಗೆ ಭಾರತ ಆಕ್ಷೇಪ
ನವದೆಹಲಿ: 1963 ರಿಂದ ಜಮ್ಮು ಮತ್ತು ಕಾಶ್ಮೀರ (Jammu Kashmir) ಹಾಗೂ ಲಡಾಖ್‌ನ (ladakh) ಕೆಲವು ಭಾಗಗಳನ್ನ ಚೀನಾ ಅತಿಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal), ದೇಶದ ಸಾರ್ವಭೌಮತ್ವ ಉಲ್ಲಂಘಿಸುವ ಯಾವುದೇ ಕ್ರಮವನ್ನೂ ಭಾರತ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಣಧೀರ್ ಜೈಸ್ವಾಲ್ ಅವರು, ಜಮ್ಮು-ಕಾಶ್ಮೀರದಲ್ಲಿರುವ ಭಾರತೀಯ ಪ್ರದೇಶಗಳಲ್ಲಿ ಚೀನಾ ಕೈಗೊಳ್ಳುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಭಾರತಕ್ಕೆ ಗಂಭೀರ ಆಕ್ಷೇಪವಿದೆ. ಅವರು, ಸಾರ್ವಭೌಮತ್ವದ ವಿಷಯಕ್ಕೆ ಬಂದಾಗ ಭಾರತ (India) ತನ್ನ ನಿಲುವನ್ನ ಸದಾ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಲೇ ಬಂದಿದೆ. ಭಾರತ ಯಾವುದೇ ರೀತಿಯಲ್ಲೂ ಚೀನಾದ ಸಾರ್ವಭೌಮತ್ವವನ್ನ ಉಲ್ಲಂಘಿಸುವುದಿಲ್ಲ. ಇದೇ ವಿಚಾರದಲ್ಲಿ ನಮ್ಮ ನಿಲುವು ಯಾವತ್ತೂ ಬದಲಾಗಿಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಚೀನಾದ ಅಕ್ರಮ ಆಕ್ರಮಣ
ಮುಂದುವರಿದು ಮಾತನಾಡಿ, 1963 ರಿಂದಲೇ ಚೀನಾ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಕೆಲವು ಭಾರತೀಯ ಪ್ರದೇಶಗಳನ್ನು ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿದೆ. ಈ ಪ್ರದೇಶಗಳ ಮೇಲೆ ಭಾರತದ ಹಕ್ಕು ಇರುವುದನ್ನ ಚೀನಾ ಅಧಿಕೃತವಾಗಿಯೂ ಒಪ್ಪಿಕೊಂಡಿದೆ. ಆದಾಗ್ಯೂ, ಜಮ್ಮು-ಕಾಶ್ಮೀರದಲ್ಲಿನ ಭಾರತೀಯ ಪ್ರದೇಶಗಳಲ್ಲಿ ಚೀನಾ ವಿವಿಧ ಯೋಜನೆಗಳನ್ನ ಜಾರಿಗೊಳಿಸುತ್ತಿದ್ದು, ಭಾರತ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ಖಡಕ್ಕಾಗಿ ಹೇಳಿದ್ದಾರೆ.
ಆಸಿಯಾನ್ ಶೃಂಗಸಭೆ ಹಿನ್ನೆಲೆಯಲ್ಲಿ ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ಭೇಟಿಯ ಒಂದು ದಿನದ ಬಳಿಕ ಈ ಹೇಳಿಕೆ ಬಂದಿದೆ ಎಂಬುದು ಗಮನಾರ್ಹ.
