ನವದೆಹಲಿ: ಪ್ರಕೃತಿಯ ಮುನಿಸಿಗೆ ಇಡೀ ಜಗತ್ತೇ ಬೆಚ್ಚಿಬೀಳುವ ಕಾಲ ಹತ್ತಿರ ಬಂದಂತಿದೆ. ಕೇವಲ ಭಾರತದ ಮುಂಗಾರು ಅಷ್ಟೇ ಅಲ್ಲ, ಇಡೀ ಜಗತ್ತಿನ ಹವಾಮಾನದ ಸಮತೋಲನವನ್ನೇ ಏರುಪೇರು ಮಾಡಲು ಜಾಗತಿಕ ಮಟ್ಟದಲ್ಲಿ ಭೀಕರ ಸೂಪರ್ ಎಲ್ ನಿನೋ (El Nino)ಪ್ರಭಾವ ಶುರುವಾಗಿದೆ.
ಪರಿಸರ ವಿಜ್ಞಾನಿಗಳು ಮತ್ತು ಹವಾಮಾನ ತಜ್ಞರ ಪ್ರಕಾರ, ಈ ಬಾರಿಯ ಎಲ್ ನಿನೋ ಸಾಮಾನ್ಯ ಮಟ್ಟಕ್ಕಿಂತಲೂ ಇತಿಹಾಸದಲ್ಲೇ ಅತ್ಯಂತ ಪ್ರಬಲವಾದ ಸೂಪರ್ ಎಲ್ ನಿನೋ ಆಗಿ ಬದಲಾಗುವ ಮುನ್ಸೂಚನೆ ಇದೆ. ಇದರ ಪರಿಣಾಮ ಈ ವರ್ಷಕ್ಕೆ ಮಾತ್ರ ಸೀಮಿತವಾಗಿರದೇ, 2027ರ ವರೆಗೂ ಮುಂದುವರೆಯಯವ ಸಾಧ್ಯತೆ ದಟ್ಟವಾಗಿದೆ ಎಂದು ಉತ್ತರ ಅಮೆರಿಕದ ಸಂಸ್ಥೆಯೊಂದು ತಿಳಿಸಿದೆ.
ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನದಲ್ಲಿ ಭಾರಿ ಏರಿಕೆಯಾಗುತ್ತಿರುವುದೇ ಈ ಜಾಗತಿಕ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಮುಂಬರುವ ನವೆಂಬರ್, ಡಿಸೆಂಬರ್ ಹಾಗೂ ಮುಂದಿನ ವರ್ಷದ ಆರಂಭದ ವೇಳೆಗೆ ಇಲ್ಲಿನ ಸಮುದ್ರದ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಲಿದೆ ಎನ್ನಲಾಗಿದೆ. ಇನ್ನೂ ಕೆಲವು ಹವಾಮಾನ ವರದಿಗಳು ಈ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ತಲುಪಿದರೂ ಆಶ್ಚರ್ಯವಿಲ್ಲ ಎಂದು ತಿಳಿಸಿವೆ.ಇದನ್ನೂ ಓದಿ: ಅಮೆರಿಕ ವಾಯುಪಡೆಯ B-52 ಬಾಂಬರ್ ಪತನ – 8 ಮಂದಿ ದುರ್ಮರಣ
ಭಾರತದಲ್ಲಿ ಇದರ ಪರಿಣಾಮ ಈಗಾಗಲೇ ಆರಂಭವಾಗಿದ್ದು, ದೇಶದಲ್ಲಿ ಮುಂಗಾರು ಮಳೆ ಕೊರತೆ ಎದುರಾಗಿದೆ. ಈ ಬಾರಿ ವಾಡಿಕೆಗಿಂತ ಶೇ.42ರಷ್ಟು ಕಡಿಮೆಯಾಗಿದ್ದು, ಕೃಷಿ ವಲಯದಲ್ಲಿ ಹೆಚ್ಚು ಆತಂಕ ಹುಟ್ಟಿಕೊಳ್ಳಲು ಕಾರಣವಾಗಿದೆ. ಮೂಲಗಳ ಪ್ರಕಾರ ಮುಂಬರುವ ದಿನಗಳಲ್ಲಿ ಸೂಕ್ತ ಸಮಯಕ್ಕೆ ಮಳೆ ಬೀಳದೇ ತಡವಾಗಿ ಮಳೆ ಬಂದರೂ, ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನಲಾಗಿದೆ.
ಎಲ್ ನಿನೋ ಕಾರಣದಿಂದಾಗಿ ತಾಪಮಾನ 1.5 ರಿಂದ 1.9 ಡಿಗ್ರಿ ಸೆಲ್ಸಿಯಸ್ ದಾಟಿದಾಗ ಅದು ಅತಿ ಪ್ರಬಲ ರೂಪ ತಾಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಳೆ ಬಂದರೂ ಅತಿಯಾದ ಶಾಖದಿಂದಾಗಿ ಭೂಮಿಯ ತೇವಾಂಶವೆಲ್ಲಾ ಕ್ಷಣಾರ್ಧದಲ್ಲಿ ಆವಿಯಾಗಿ ಹೋಗುತ್ತದೆ. ಪರಿಣಾಮವಾಗಿ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಲಿದ್ದು, ನೀರಿನ ಅಂತರ್ಜಲದ ಮಟ್ಟ ಕುಸಿಯುವ ಸಾಧ್ಯತೆಯಿದೆ. ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ದೇಶಗಳೂ ಕೂಡ ಈ ಭೀಕರ ಬರಗಾಲದ ಸಂಕಷ್ಟದ ಸುಳಿಗೆ ಸಿಲುಕುವ ಭೀತಿಯಿದೆ.
ಏನಿದು ಸೂಪರ್ ಎಲ್ ನಿನೋ?
ಎಲ್ ನಿನೋ ಎಂದರೆ ಪೆಸಿಫಿಕ್ ಸಾಗರದಲ್ಲಿ ಸಂಭವಿಸುವ ನೈಸರ್ಗಿಕ ಹವಾಮಾನ ವಿದ್ಯಾಮಾನ. ಕೇಂದ್ರ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಮಹಾಸಾಗರದ ನೀರು ಹೆಚ್ಚು ಬಿಸಿಯಾಗುವುದು. ಈ ರೀತಿ ಸಮುದ್ರದ ನೀರು ಹೆಚ್ಚು ಬಿಸಿಯಾದಾಗ ಅದು ಜಾಗತಿಕ ಗಾಳಿಯ ವಾತಾವರಣದ ಪರಿಚಲನೆಯನ್ನು ಬದಲಾಯಿಸುತ್ತದೆ. ಇದರ ಪರಿಣಾಮವಾಗಿ ಜಗತ್ತಿನ ವಿವಿಧೆಡೆ ತಾಪಮಾನ ಮತ್ತು ಚಂಡಮಾರುತದ ಹವಾಮಾನ ಸಂಪೂರ್ಣವಾಗಿ ಬದಲಾಗುತ್ತದೆ. ಸಾಮಾನ್ಯವಾಗಿ ಭಾರತದತ್ತ ಸಾಗಿಬರುವ ಮಳೆಯ ಮಾರುತಗಳನ್ನು ಇದು ತಡೆಯುವುದರಿಂದ ಭಾರತದಲ್ಲಿ ಮುಂಗಾರು ಕುಂಠಿತಗೊಂಡು ಬರಗಾಲ ಹಾಗೂ ತಾಪಮಾನ ಹೆಚ್ಚಾಗುತ್ತದೆ. ಇದನ್ನೇ ಸೂಪರ್ ಎಲ್ ನಿನೋ ಎಂದು ಕರೆಯಲಾಗುತ್ತದೆ. ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯನ್ನು ಲಾ ನಿನಾ ಎಂದು ಕರೆಯಲಾಗುತ್ತದೆ. ಇದರಲ್ಲಿ ಪೆಸಿಫಿಕ್ ಮಹಾಸಾಗರದ ನೀರು ವಾಡಿಕೆಗಿಂದ ಹೆಚ್ಚು ಮುಂಗಾರು ಮಳೆಯಾಗಿ ಭೂಮಿಯನ್ನು ತಂಪಾಗಿರಿಸುತ್ತದೆ. ಇದನ್ನೂ ಓದಿ: ನೀಟ್‌ಗಾಗಿ ಟೆಲಿಗ್ರಾಂ ನಿಷೇಧ – ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್
