ವಾಷಿಂಗ್ಟನ್: ಅಮೆರಿಕ ವಾಯುಪಡೆಯ ಶಕ್ತಿಶಾಲಿ B-52 ಬಾಂಬರ್ (B-52 Bomber) ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 8 ಮಂದಿ ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ (California) ನಡೆದಿದೆ.
ವಿಮಾನ ಅಪಘಾತವು (B-52 Bomber crashes) ಲಾಸ್ ಏಂಜಲೀಸ್‌ನ ಉತ್ತರಕ್ಕೆ ಸುಮಾರು 95 ಕಿಮೀ ದೂರದಲ್ಲಿ ಸಂಭವಿಸಿದೆ. ವಿಮಾನ ಪತನಗೊಂಡ ಬೆನ್ನಲ್ಲೇ ಸ್ಥಳದಲ್ಲಿ ಭಾರೀ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುನೆಲೆಯಲ್ಲಿ (Edwards Air Force Base) ಮಧ್ಯಾಹ್ನ ಟೇಕ್-ಆಫ್ ಆದ ಸ್ವಲ್ಪ ಸಮಯದಲ್ಲೇ ವಿಮಾನ ದುರಂತಕ್ಕೀಡಾಗಿದೆ.

ನಿತ್ಯ ಪರೀಕ್ಷಾ ಕಾರ್ಯಾಚರಣೆಗಾಗಿ 8 ಜನರನ್ನ ಹೊತ್ತೊಯ್ಯುತ್ತಿದ್ದ ವಾಯುಪಡೆಯ ʻಸ್ಟ್ರಾಟೊಫೋರ್ಟ್ರೆಸ್ʼ ಹೆಸರಿನ ಬಿ-52 ಬಾಂಬರ್, ಸೋಮವಾರ ಬೆಳಗ್ಗೆ 11:20 ರ ಸುಮಾರಿಗೆ ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಬದುಕುಳಿಯುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಎಡ್ವರ್ಡ್ಸ್ ನೆಲೆಯ ವಾಯುಪಡೆ ಹೇಳಿದೆ.
ಘಟನೆ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತುರ್ತು ಕಾರ್ಯಾಚರಣೆ ಕೈಗೊಂಡಿದ್ದಾರೆ. ತಾತ್ಕಾಲಿಕವಾಗಿ ವಿಮಾನ ನಿಲ್ದಾಣವನ್ನ ಬಂದ್ ಮಾಡಲಾಗಿದೆ. ಅಲ್ಲದೇ ಈ ಮಾರ್ಗದಲ್ಲಿ ಬರುವ ಎಲ್ಲಾ ವಿಮಾನಗಳನ್ನ ಬೇರೆಡೆಗೆ ತಿರುಗಿಸಲಾಗಿದೆ.
ಬದುಕುಳಿಯುವ ಸಾಧ್ಯತೆ ಕಡಿಮೆ
8 ಎಂಜಿನ್‌ಗಳಿರುವ ಬಿ-52 ಬಾಂಬರ್ ವಿಮಾನವು ಪರಮಾಣು ಮತ್ತು ಸಾಂಪ್ರದಾಯಿಕ ಬಾಂಬ್‌ಗಳನ್ನ ಸಾಗಿಸಲು ವಿನ್ಯಾಸಗೊಳಿಸಲಾಗಿತ್ತು. ಇದು ಟೇಕ್ ಆಫ್ ಆದ ಕೆಲವೇ ಗಂಟೆಗಳ ಬಳಿಕ ಎಡ್ವರ್ಡ್ಸ್ ವಾಯುನೆಲೆಯ ರನ್‌ವೇಗೆ ಅಪ್ಪಳಿಸಿದೆ ಎಂದು ವಾಯುಪಡೆಯ ಕರ್ನಲ್ ಜೇಮ್ಸ್ ಹೇಯ್ಸ್ ತಿಳಿಸಿದ್ದಾರೆ.
ಈ ವಿಮಾನವು ರಾಡಾರ್ ಆಧುನೀಕರಣ ಕಾರ್ಯಕ್ರಮದ ಭಾಗವಾಗಿತ್ತು. ಇದರಲ್ಲಿ ಸರ್ಕಾರಿ ಹಾಗೂ ಮಿಲಿಟರಿ ಸಿಬ್ಬಂದಿ ಸೇರಿ 8 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನವು ಸಂಪೂರ್ಣ ನಾಶವಾಗಿದ್ದು, ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಇದೆ. ಅಪಘಾತಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ, ಈ ಬಗ್ಗೆಯೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
