ಕಾರವಾರ: ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ತೋರಿಸಲು ಬಹಳಷ್ಟು ಸಾಧಕಿಯರು ನಮ್ಮ ಮುಂದಿದ್ದಾರೆ. ಆದರೆ ಯಾವ ಪ್ರತಿಫಲಾಪೇಕ್ಷೆ ನಿರೀಕ್ಷಿಸದೇ ಜನರ ಸೇವೆ ಮಾಡುತ್ತಾ ತೆರೆಮರೆಯಲ್ಲಿರುವವರು ಕೂಡ ಅನೇಕರಿದ್ದಾರೆ. ಎಲೆಮರೆಯ ಕಾಯಿಯಾಗಿ ಸಂಪ್ರದಾಯಿಕ ನಾಟಿ ಔಷಧಿ ನೀಡುವ ಮೂಲಕ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನೂರಾರು ಜನರ ಪ್ರಾಣ ರಕ್ಷಿಸಿದ ವೃದ್ಧೆಯೊಬ್ಬರ ಯಶೋಗಾಥೆ ಇದು.
ದೇವಿ ಗೌಡ(68) ವಿಷ ಜಂತುಗಳು ಕಚ್ಚಿದ ವ್ಯಕ್ತಿಗಳ ಗಾಯದ ಮೇಲೆ ಕೊಳವೆ ಇಟ್ಟಕೊಂಡು ತನ್ನ ಬಾಯಿಯಿಂದ ಉಸಿರನ್ನ ತೆಗೆದುಕೊಂಡು ಅವರ ದೇಹದೊಳಗೆ ಸೇರಿರುವ ವಿಷವನ್ನು ತೆಗೆದು ಇನ್ನೊಬ್ಬರ ಉಸಿರು ಉಳಿಸುತ್ತಾರೆ.
Advertisement
ಇವರು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿ ಗ್ರಾಮದ ಹಡವು ಎಂಬ ಪುಟ್ಟಹಳ್ಳಿ ಬುಡಕಟ್ಟು ಜನಾಂಗದ ಮಹಿಳೆಯಾಗಿದ್ದು, ಯಾವುದೇ ವೈದ್ಯಕೀಯ ತರಬೇತಿ ಪಡೆದುಕೊಂಡವರಲ್ಲ. ತಲೆತಲಾಂತರದಿಂದ ಹಿರಿಯರು ಕಲಿಸಿಕೊಟ್ಟ ನಾಟಿವೈದ್ಯ ವಿದ್ಯೆಯಿಂದ ಹಲವರ ಬದುಕನ್ನು ಬೆಳಗಿಸುತ್ತಿದ್ದಾರೆ.
Advertisement
Advertisement
ಕಾಡಿನಲ್ಲಿ ಸಿಗುವ ವಿವಿಧ ಜಾತಿಯ ಬೇರುಗಳನ್ನು ತೆಗೆದುಕೊಂಡು ಬಂದು ಅದರಿಂದ ಔಷಧಿ ತಯಾರಿಸಿ ಹಾವು, ನಾಯಿ ಕಡಿದವರಿಗೆ ಹಚ್ಚಿ ಗುಣಮುಖರನ್ನಾಗಿಸುತ್ತಿದ್ದಾರೆ. ನರ ವ್ಯಾಧಿ ಇರುವ ಮಕ್ಕಳಿಗೆ, ಸಂತಾನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಗಿಡಮೂಲಿಕೆ ಔಷಧಿಯನ್ನ ನೀಡೋ ಮೂಲಕ ಅವರ ಕೊರಗನ್ನ ದೂರ ಮಾಡುತ್ತಾ ಬಂದಿದ್ದಾರೆ. ಈ ಕಾಯಕವನ್ನ ಯಾವುದೇ ಪ್ರತಿಫಲವಿಲ್ಲದೇ ಮಾಡುತಿದ್ದು ನೂರಾರು ಜನರ ಪ್ರಾಣ ಉಳಿಸಿದ್ದಾರೆ.
Advertisement
ಇವರು ಚಿಕಿತ್ಸೆ ನೀಡುವ ಪದ್ಧತಿಯೂ ವಿಶಿಷ್ಟವಾಗಿದ್ದು ಕೊಳವೆ ಮೂಲಕ ವಿಷಜಂತುಗಳು ಕಚ್ಚಿದ ಜಾಗದಿಂದ ರಕ್ತ ಸಮೇತ ವಿಷವನ್ನು ತನ್ನ ಬಾಯಿ ಮೂಲಕ ಹೊರತೆಗೆಯುತ್ತಾರೆ. ಸ್ವಲ್ಪ ಯಾಮಾರಿದರೂ ಇವರ ಜೀವಕ್ಕೆ ತೊಂದರೆ. ಆದರೆ ಕಳೆದ 35 ವರ್ಷಗಳಿಂದ ನೂರಾರು ಜನರಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ಇದಕ್ಕಾಗಿ ಹಣ ಪಡೆಯದಿದ್ದರೂ ಇವರ ಬಡತನ ನೋಡಿ ಜನ ಹಣ ನೀಡುತ್ತಾರೆ. ಆದರೆ ಇದೊಂದು ಸೇವೆ ಎಂದು ಮಾಡಿಕೊಂಡು ಬರುತ್ತಿರುವ ಇವರು ಯಾರ ಮುಂದೆಯೂ ಕೈಚಾಚದೇ, ಹೆಸರಿಗಾಗಿ ನೋಡದೇ ಸೇವೆ ನೀಡುತಿದ್ದು ಇಂತವರನ್ನು ಸರ್ಕಾರ ಗುರುತಿಸಬೇಕೆಂಬುದು ಸ್ಥಳೀಯ ಜನರ ಹಂಬಲ.
ಅನಕ್ಷರಸ್ತೆಯಾದರೂ ಪಾರಂಪರಿಕ ಔಷಧಿ ನೀಡವ ಮೂಲಕ ಸಂಪ್ರದಾಯಿಕ ಪದ್ಧತಿಯನ್ನು ಉಳಿಸಿ ಬೆಳಸಿಕೊಂಡು ಬರುತ್ತಿದ್ದಾರೆ. ತಮ್ಮ ವಿದ್ಯೆಯನ್ನು ಧಾರೆ ಎರೆಯಲು ಸದಾ ಸಿದ್ಧರಿರುವ ಇವರ ಸೇವೆ ನಿಜವಾಗಿಯೂ ಸ್ಮರಿಸುವಂತದ್ದು. ಮಹಿಳೆಯರಿಗಾಗಿ ಮಹಿಳಾ ದಿನಾಚರಣೆ ಆಚರಿಸುವ ನಾವು ತೆರೆ ಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಂತವರನ್ನು ಸ್ಮರಿಸಬೇಕಿದೆ.