ನವದೆಹಲಿ: ಭಾರತದ ಖ್ಯಾತ ಶೂಟಿಂಗ್ ಕೋಚ್ ಹಾಗೂ ಮಾಜಿ ಶೂಟರ್ ಜಸ್ಪಾಲ್ ರಾಣಾ (Jaspal rana) ಅವರು 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳ ಹಿಂದೆ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಐಎಸ್ಎಸ್‌ಎಫ್ ವಿಶ್ವಕಪ್ ವೇಳೆ ಜಸ್ಪಾಲ್ ರಾಣಾ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆರಂಭದಲ್ಲಿ ಅದನ್ನು ಅಸಿಡಿಟಿ ಎಂದು ಭಾವಿಸಿದ್ದ ಅವರು ತಮ್ಮ ಪ್ರವಾಸವನ್ನು ಮುಂದುವರಿಸಿದ್ದರು. ಆದರೆ ಭಾರತಕ್ಕೆ ವಾಪಸ್ ಬರುವ ವೇಳೆ ವಿಮಾನ ಪ್ರಯಾಣದ ಸಮಯದಲ್ಲೂ ಮತ್ತೆ ಎದೆನೋವು ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಯುವಕನಾಗಿದ್ದಾಗ ನಕ್ಸಲನಾಗಲು ಬಯಸಿದ್ದೆ – ಪವನ್ ಕಲ್ಯಾಣ್
ದೆಹಲಿ ತಲುಪಿದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್ ಇರುವುದು ಪತ್ತೆಯಾಗಿತ್ತು. ಬಳಿಕ ಸ್ಟೆಂಟ್ ಅಳವಡಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇನ್ನೊಂದು ಸ್ಟೆಂಟ್ ಅಳವಡಿಸುವ ಪ್ರಕ್ರಿಯೆಯೂ ನಡೆಯಬೇಕಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜಸ್ಪಾಲ್ ರಾಣಾ ನಿಧನರಾಗಿದ್ದಾರೆ.
ಭಾರತೀಯ ಶೂಟಿಂಗ್ ಕ್ಷೇತ್ರದ ದಿಗ್ಗಜರಾಗಿದ್ದ ಜಸ್ಪಾಲ್ ರಾಣಾ, ಒಲಿಂಪಿಯನ್ ಮನು ಭಾಕರ್ ಅವರ ಯಶಸ್ಸಿನ ಹಿಂದಿನ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲೇ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಪದಕಗಳನ್ನು ಗೆದ್ದುಕೊಟ್ಟಿದ್ದರು.
ಜಸ್ಪಾಲ್ ರಾಣಾ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲೂ ಭಾರತದ ಪರ ಅತ್ಯಂತ ಯಶಸ್ವಿ ಶೂಟರ್‌ಗಳಲ್ಲಿ ಒಬ್ಬರಾಗಿದ್ದರು. 1994, 1998, 2002 ಮತ್ತು 2006ರ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದು ಮಿಂಚಿದ್ದರು. ಕೇವಲ 18ನೇ ವಯಸ್ಸಿನಲ್ಲಿ 1994ರ ಮಿಲಾನ್ ವಿಶ್ವ ಚಾಂಪಿಯನ್‌ಶಿಪ್‌ನ ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, ವಿಶ್ವ ದಾಖಲೆಯೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು.ಇದನ್ನೂ ಓದಿ: ಟಿಎಂಸಿ ‘ಪುಷ್ಪಾ’ ಜಹಾಂಗೀರ್ ಖಾನ್‌ಗೆ ಪೊಲೀಸರ ಶಾಕ್ – ಚಡ್ಡಿಯಲ್ಲಿ ಮೆರವಣಿಗೆ
