LatestLeading NewsMain PostNational

ಏರ್‌ಬಸ್‌ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ

– ವಡೋದರಾದಲ್ಲಿ ನಿರ್ಮಾಣ, ಅ.30ಕ್ಕೆ ಮೋದಿ ಶಂಕುಸ್ಥಾಪನೆ
– ಯುರೋಪ್‌ ಹೊರಗಡೆ ತೆರೆಯುತ್ತಿರುವ ಮೊದಲ ಏರ್‌ಬಸ್‌ ಘಟಕ

ನವದೆಹಲಿ: ಏರ್‌ ಇಂಡಿಯಾ ಖರೀದಿಸಿದ್ದ ಟಾಟಾ ಸಮೂಹ(Tata Group) ಈಗ  ವಿಮಾನ ತಯಾರಿಸಲು ಮುಂದಾಗಿದೆ.

ಹೌದು. ಜಗತ್ತಿನ ದೊಡ್ಡ ವಿಮಾನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಯುರೋಪ್‌ ಮೂಲದ ಏರ್‌ಬಸ್‌(Airbus) ಜೊತೆಗೂಡಿ ಮೇಕ್‌ ಇನ್‌ ಇಂಡಿಯಾ(Make In India) ಅಡಿ ಟಾಟಾ ಸಮೂಹ ವಾಯುಸೇನೆಗೆ C-295MW ವಿಮಾನವನ್ನು ನಿರ್ಮಾಣ ಮಾಡಲಿದೆ.

ಗುಜರಾತಿನ ವಡೋದರಾದಲ್ಲಿ(Vadodara) ನಿರ್ಮಾಣ ಘಟಕ ಆರಂಭವಾಗಲಿದ್ದು ಪ್ರಧಾನಿ ನರೇಂದ್ರ ಮೋದಿ(Narenndra Modi) ಅ.30 ರಂದು ಶಂಕುಸ್ಥಾಪನೆ ನಡೆಸಲಿದ್ದಾರೆ. ಯೋಜನೆಯ ಒಟ್ಟು ವೆಚ್ಚ 21,935 ಕೋಟಿ ರೂ. ಆಗಿದ್ದು ವಿಮಾನವನ್ನು ನಾಗರಿಕ ಉದ್ದೇಶಗಳಿಗಾಗಿಯೂ ಬಳಸಬಹುದಾಗಿದೆ.

ಯುರೋಪ್‌ ಹೊರಗಡೆ ಏರ್‌ಬಸ್‌ ಕಂಪನಿ ತನ್ನ ತಯಾರಿಕಾ ಘಟಕ ತೆರೆಯುತ್ತಿರುವುದು ಇದೇ ಮೊದಲಾಗಿರುವ ಕಾರಣ ಈ ಯೋಜನೆ ಭಾರೀ ಮಹತ್ವ ಪಡೆದಿದೆ. ಇದನ್ನೂ ಓದಿ: ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್‌ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ

ಏನಿದು ಯೋಜನೆ?
ರಕ್ಷಣೆಯಲ್ಲಿ ಸ್ವಾವಲಂಬಿಯಾಗಲು ಭಾರತ ಮುಂದಾಗುತ್ತಿದ್ದು ಈ ನಿಟ್ಟಿನಲ್ಲಿ ಮೇಕ್‌ ಇನ್‌ ಇಂಡಿಯಾದ ಅಡಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. 2021ರ ಸೆಪ್ಟೆಂಬರ್‌ನಲ್ಲಿ ರಕ್ಷಣೆಗೆ ಸಂಬಂಧಿಸಿದ ಉಪಸಮಿತಿ ಏರ್‌ಬಸ್‌ ಕಂಪನಿಯ ಜೊತೆ 56 C-295MW ಸರಕು ವಿಮಾನ ಖರೀದಿ ಸಂಬಂಧ ಒಪ್ಪಂದ ನಡೆಸಿತ್ತು. ಏರ್‌ಬಸ್‌ ಕಂಪನಿ ಮೊದಲು ಹಾರಾಟಕ್ಕೆ ಯೋಗ್ಯವಾಗಿರುವ 16 ವಿಮಾನಗಳನ್ನು ನೀಡಬೇಕು. ಬಳಿಕ 40 ವಿಮಾನಗಳನ್ನು ಭಾರತದಲ್ಲೇ ತಯಾರಿಸಿ ವಾಯುಸೇನೆಗೆ ಹಸ್ತಾಂತರಿಸಬೇಕು ಎಂದು ಒಪ್ಪಂದದಲ್ಲಿ ತಿಳಿಸಲಾಗಿತ್ತು.

ವಾಯುಸೇನೆಗೆ 56 ವಿಮಾನಗಳ ವಿತರಣೆಯನ್ನು ಪೂರ್ಣಗೊಳಿಸಿದ ನಂತರ, ಏರ್‌ಬಸ್ ಡಿಫೆನ್ಸ್ ಭಾರತದಲ್ಲಿ ತಯಾರಿಸಿದ ವಿಮಾನಗಳನ್ನು ಸಿವಿಲ್ ಆಪರೇಟರ್‌ಗಳಿಗೆ ಮಾರಾಟ ಮಾಡಬಹುದು. ಅಷ್ಟೇ ಅಲ್ಲದೇ ಭಾರತ ಸರ್ಕಾರ ಅನುಮತಿ ನೀಡಿದ ದೇಶಗಳಿಗೆ ರಫ್ತು ಮಾಡಬಹುದಾಗಿದೆ

C-295MW ಸಮಕಾಲೀನ ತಂತ್ರಜ್ಞಾನದೊಂದಿಗೆ 5-10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು ಅದು ವಾಯುಸೇನೆಯ ಹಳೆಯ ಅವ್ರೋ ವಿಮಾನವನ್ನು ಬದಲಾಯಿಸುತ್ತದೆ. ಎಲ್ಲಾ 56 ವಿಮಾನಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ ಅಭಿವೃದ್ಧಿ ಪಡಿಸಿರುವ ಸ್ಥಳೀಯ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ಗಳನ್ನು ಅಳವಡಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಭಾರತದಲ್ಲಿ ವಾಯು ಸಾರಿಗೆ ದೊಡ್ಡ ಉದ್ಯಮವಾಗಿ ಬೆಳೆಯುವುದರಿಂದ ಆಮದು ಅವಲಂಬನೆಯನ್ನು ಕಡಿಮೆ ಮಾಡಲಿದೆ. ಹೆಚಿನ ರಫ್ತು ಮಾಡುವುದರ ಜೊತೆಗೆ ದೇಶೀಯ ವಿಮಾನಯಾನ ತಯಾರಿಕೆಯನ್ನು ವೃದ್ಧಿಸಲಿದೆ.

ಭಾರತದಲ್ಲಿ ಮಿಲಿಟರಿ ವಿಮಾನಗಳನ್ನು ಎಚ್‌ಎಎಲ್‌ ಕಂಪನಿ ತಯಾರಿಸುತ್ತಿದೆ. ಆದರೆ ವಿದೇಶಿ ಕಂಪನಿ ಮಿಲಿಟರಿ ವಿಮಾನಗಳನ್ನು ದೇಶದಲ್ಲಿ ತಯಾರಿಸಲು ಮುಂದಾಗುತ್ತಿರುವುದು ಇದೇ ಮೊದಲು.

Live Tv

Leave a Reply

Your email address will not be published. Required fields are marked *

Back to top button