ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival 2026) ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೊಮ್ಮೆ ತಮ್ಮ ಅದ್ಭುತ ಫ್ಯಾಷನ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 79ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ 24ನೇ ಬಾರಿ ಭಾಗವಹಿಸಿದ ಐಶ್ವರ್ಯಾ ರೈ, ರೆಡ್ ಕಾರ್ಪೆಟ್ ಮೇಲೆ ರಾಯಲ್ ಲುಕ್‌ನಲ್ಲಿ ಮಿಂಚಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಈ ವರ್ಷ ಕೇನ್ಸ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಭಾಗವಹಿಸುತ್ತಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಲೋರಿಯಲ್ ಬ್ರ‍್ಯಾಂಡಿಂಗ್ ಪೋಸ್ಟರ್‌ಗಳಲ್ಲಿ ಐಶ್ವರ್ಯಾ ರೈ (Aishwarya Rai) ಅವರು ಕಾಣಿಸದ ಹಿನ್ನೆಲೆ ಹಲವು ವದಂತಿಗಳು ಹರಿದಾಡಿದ್ದವು. ಆದರೆ ಪುತ್ರಿ ಆರಾಧ್ಯ ಬಚ್ಚನ್ ಜೊತೆ ಮುಂಬೈನಿಂದ ಫ್ರಾನ್ಸ್‌ಗೆ ತೆರಳಿದಾಗ ಅವರ ಏರ್ಪೋರ್ಟ್ ಲುಕ್ ವೈರಲ್ ಆಗಿದ್ದರಿಂದ ಎಲ್ಲ ಊಹಾಪೋಹಗಳಿಗೆ ಸ್ಪಷ್ಟನೆ ಸಿಕ್ಕಿತು.

ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ರೈ ಅವರು ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ವಿಶೇಷ ಬ್ಲೂ ಮರ್ಮೇಡ್ ಸ್ಟೈಲ್ ಗೌನ್ ಧರಿಸಿ ಕಾಣಿಸಿಕೊಂಡರು. ‘ಲುಮಿನಾರಾ’ ಹೆಸರಿನ ಈ ಕೌಚರ್ ಡ್ರೆಸ್‌ನ್ನು ಬೆಳಕು ಮತ್ತು ಶಕ್ತಿಯ ಕಲ್ಪನೆಯನ್ನು ಆಧರಿಸಿ ವಿನ್ಯಾಸ ಮಾಡಲಾಗಿದೆ. ಈ ಉಡುಪಿಗೆ ಸಾಫ್ಟ್ ಕರ್ಲಿ ಹೇರ್ ಸ್ಟೈಲ್, ಪಿಂಕ್ ಟೋನ್ ಮೇಕಪ್ ಹಾಗೂ ನೀಲಿ ಡೈಮಂಡ್‌ಗಳಿರುವ ಜ್ಯುವೆಲರಿ ಮತ್ತಷ್ಟು ಮೆರುಗು ನೀಡಿತು.
ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ಅವರು ಎಲ್ಲರಿಗೂ ನಮಸ್ತೆ ಹೇಳಿ, ಕಾನ್ಫಿಡೆನ್ಸ್ ವಾಕ್‌ನಿಂದ ಅಭಿಮಾನಿಗಳ ಗಮನ ಸೆಳೆದರು. ಜೊತೆಗೆ ತಮ್ಮ ಆಪ್ತ ಸ್ನೇಹಿತೆ ಹಾಗೂ ಲೋರಿಯಲ್ ಬ್ರ‍್ಯಾಂಡ್ ಅಂಬಾಸಿಡರ್ ಇವಾ ಲೊಂಗೋರಿಯಾ ಜೊತೆಗೂ ಫೋಟೋಗೆ ಪೋಸ್ ನೀಡಿದರು.

ಇನ್ನು ಕೇನ್ಸ್ ಕ್ಲೋಸಿಂಗ್ ಸಮಾರಂಭದಲ್ಲಿ ಐಶ್ವರ್ಯಾ ರೈ ಅವರು ಮತ್ತೊಂದು ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡರು. ಚೀನಾದ ಡಿಸೈನರ್ ಚೆನಿ ಚಾನ್ ವಿನ್ಯಾಸದ ವೈಟ್ ಪ್ಯಾಂಟ್‌ಸೂಟ್ ಧರಿಸಿದ ಅವರು, ಸಿಲ್ವರ್ ಎಂಬೆಲಿಷ್‌ಮೆಂಟ್ ಹಾಗೂ ಫೆದರ್ ಸ್ಟೋಲ್‌ನೊಂದಿಗೆ ಎಲಿಗೆಂಟ್ ಲುಕ್‌ನಲ್ಲಿ ಮಿಂಚಿದರು. ಸ್ಮೋಕಿ ಐ ಮೇಕಪ್ ಮತ್ತು ಸ್ಟೈಲಿಷ್ ಹೇರ್ ಲುಕ್ ಅವರ ಫ್ಯಾಷನ್‌ಗೆ ಹೊಸ ಮೆರುಗು ನೀಡಿತು. ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯ ಬಚ್ಚನ್ ಕೂಡ ಕೆಂಪು ಬಣ್ಣದ ಗೌನ್‌ನಲ್ಲಿ ತಾಯಿಯ ಜೊತೆ ಗಮನ ಸೆಳೆದರು.
ಕೇನ್ಸ್ ಫೆಸ್ಟಿವಲ್‌ಗೆ ತೆರಳುವ ಮುನ್ನ ಮುಂಬೈ ಏರ್‌ಪೋರ್ಟ್‌ನಲ್ಲಿ ಐಶ್ವರ್ಯಾ ರೈ ಮತ್ತು ಆರಾಧ್ಯ ಆಲ್ ಬ್ಲಾಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಜ್ಯುವೆಲ್ ಕ್ರಸ್ಟೆಡ್ ಬ್ಲೇಜರ್ ಹಾಗೂ ಬ್ಲಾಕ್ ಪ್ಯಾಂಟ್ ಧರಿಸಿದ್ದ ಐಶ್ವರ್ಯಾ ಅವರ ಏರ್ಪೋರ್ಟ್ ಲುಕ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
