ನಮ್ಮ ಪ್ರಪಂಚದಲ್ಲಿ ಅತ್ಯಂತ ಪವಿತ್ರ ಸ್ಥಳಗಳು ಸಾಕಷ್ಟಿವೆ. ಅವುಗಳು ಅನೇಕ ಧರ್ಮಗಳಿಗೆ ಸಂಬಂಧಿಸಿವೆ. ಅವುಗಳಲ್ಲಿ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಕೂಡ ಒಂದು. ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿದಾನಗಳ ನೆನಪಿನಲ್ಲಿ ಆಚರಿಸುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಮೆಕ್ಕಾದಲ್ಲಿರುವ ಹಜ್‌ಗೆ ಯಾತ್ರೆ ಕೈಗೊಳ್ಳುತ್ತಾರೆ. ಈ ಬಾರಿ ಮೇ 28 ರಂದು ಹಬ್ಬ ಆಚರಿಸಲಾಗುತ್ತಿದೆ. ಈ ಬಕ್ರೀದ್ ಹಬ್ಬದ ಸಂದರ್ಭದಲ್ಲೇ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆಯೂ ಆರಂಭವಾಗಿರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕೆಂದು ಇಸ್ಲಾಂ ಹೇಳುತ್ತದೆ.
ಆದ್ರೆ ಹಜ್‌ಗೆ ಹೋಗಲು ಎಷ್ಟು ವೆಚ್ಚವಾಗುತ್ತದೆ? ಏನೆಲ್ಲಾ ನಿಯಮಗಳಿವೆ? ಯಾರು ಹೋಗಬಹುದು? ಎಂಬುದು ಈಗಾಗಲೇ ಮುಸ್ಲಿಂ ಬಾಂಧವರಿಗೆ ತಿಳಿದ ವಿಚಾರ. ಆದ್ರೆ ಸಾಮಾನ್ಯವಾಗಿ ಹಜ್ ಯಾತ್ರೆ 40 ರಿಂದ 45 ದಿನಗಳವರೆಗೆ ಕೈಗೊಳ್ಳುತ್ತಾರೆ. ಇದು ಬಹುಬೇಗನೇ ತಮ್ಮ ಯಾತ್ರಾ ಕೆಲಸ ಮುಗಿಸಿಕೊಳ್ಳುತ್ತಿದ್ದವರಿಗೆ ಯಾತ್ರೆ ಮುಗಿದರೂ ಅಲ್ಲಿಯೇ ಉಳಿಯಬೇಕಾದ ಸ್ಥಿತಿ ಬರುತ್ತಿತ್ತು. ಆದರೀಗ ಕೇಂದ್ರ ಸರ್ಕಾರ ಈ ಸಂಕಷ್ಟವನ್ನು ದೂರ ಮಾಡಲು ಇದೇ ಮೊದಲ ಬಾರಿಗೆ ಹಜ್ ಯಾತ್ರೆಗಾಗಿ ಕಿರು ಪ್ಯಾಕೇಜ್‌ವೊಂದನ್ನ ಪರಿಚಯಿಸಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಮೇ 17 ರಂದು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಿರು ಪ್ಯಾಕೇಜ್ ಯಾತ್ರೆಗೆ ಚಾಲನೆ ನೀಡಿದರು. ಇದು ಸಾವಿರಾರು ಭಾರತೀಯ ಮುಸ್ಲಿಮರು 40 ರಿಂದ 45 ದಿನಗಳವರೆಗೆ ಕೈಗೊಳ್ಳುತ್ತಿದ್ದ ಯಾತ್ರೆಯನ್ನು 20 ದಿನಗಳಲ್ಲೇ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ಹಜ್‌ಗೆ ಯಾರು ಹೋಗಬಹುದು?
ಹಜ್ ಯಾತ್ರೆಯ ಮೊದಲ ಷರತ್ತು ಆ ವ್ಯಕ್ತಿಯು ಮುಸ್ಲಿಂ ಆಗಿರಬೇಕು. ಈ ಷರತ್ತುಗಳನ್ನು ಪೂರೈಸಿದ ನಂತರ ಮಾತ್ರ ಒಬ್ಬ ವ್ಯಕ್ತಿಯು ಹಜ್‌ಗೆ ಹೋಗಬಹುದು. ಅಷ್ಟೇ ಅಲ್ಲ, ಮಹಿಳೆಯರ ಷರಿಯಾ ಮೊಹರಮ್ ಬಗ್ಗೆಯೂ ಕೆಲವು ನಿಯಮಗಳನ್ನು ಮಾಡಲಾಗಿದೆ. ಅನುಸರಿಸದಿದ್ದರೆ ಅವರು ಹಜ್‌ಗೆ ಹೋಗುವಂತಿಲ್ಲ. ಅಲ್ಲದೆ, ವಿಮಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಕೂಡ ಅನುಸರಿಸಬೇಕು. ಇಲ್ಲದೇ ಹೋದಲ್ಲಿ ಹಜ್ ಯಾತ್ರೆಗೆ ಹೋಗಲು ತೊಂದರೆ ಎದುರಿಸಬೇಕಾಗುತ್ತದೆ.
ಎರಡು ರೀತಿಯಲ್ಲಿ ಹಜ್
ಮುಸ್ಲಿಂ ಧರ್ಮದ ಹೊರತಾಗಿ ಬಹುಶಃ ಬೇರೆ ಧರ್ಮದ ಜನರಿಗೆ ಈ ಹಜ್ ಯಾತ್ರೆ ಎರಡು ರೀತಿಯಲ್ಲಿ ನಡೆಯುತ್ತದೆ ಎಂಬ ವಿಷಯವೇ ತಿಳಿದಿರುವುದಿಲ್ಲ. ಹಜ್ ಯಾತ್ರಿಕರು ಎರಡು ರೀತಿಯಲ್ಲಿ ಹಜ್‌ಗೆ ಹೋಗುತ್ತಾರೆ. ಒಂದು ಹಜ್ ಸಮಿತಿಯ ಸಹಾಯದಿಂದ ಮತ್ತು ಇನ್ನೊಂದು ಖಾಸಗಿ ಪ್ರವಾಸದ ಮೂಲಕ. ಕಳೆದ ವರ್ಷ 1.63 ಲಕ್ಷಕ್ಕೂ ಅಧಿಕ ಮಂದಿ ಹಜ್ ಯಾತ್ರೆ ಕೈಗೊಂಡಿದ್ದರು. ಇನ್ನೂ ಈ ಬಾರಿ 1.75 ಲಕ್ಷ ಭಾರತೀಯ ಮುಸ್ಲಿಮರು ಹಜ್ ಯಾತ್ರೆ ಕೈಗೊಂಡಿದ್ದಾರೆ.

ಕಿರು ಪ್ಯಾಕೇಜ್‌ನಿಂದ ಯಾರಿಗೆ ಪ್ರಯೋಜನ?
ಭಾರತದ ಹಜ್ ಸಮಿತಿ ಪ್ರಾರಂಭಿಸಿದ ಈ ಉಪಕ್ರಮವು, ಒಂದು ತಿಂಗಳಿಗೂ ಹೆಚ್ಚು ಕಾಲ ಕೆಲಸದಿಂದ ದೂರವಿರಲು ಸಮಸ್ಯೆ ಎದುರಿಸುತ್ತಿದ್ದ ವೃತ್ತಿಪರರು, ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಈ ವರ್ಷ 10,000 ಯಾತ್ರಿಕರು ಈ ವಿಶೇಷ ಕಿರುಪ್ಯಾಕೇಜ್ ಅಡಿಯಲ್ಲಿ ಪ್ರಯಾಣಿಸಲಿದ್ದಾರೆ. ಈ ಪ್ಯಾಕೇಜ್‌ನಲ್ಲಿ ಹಜ್‌ನ ಎಲ್ಲಾ ಕಡ್ಡಾಯ ಆಚರಣೆಗಳನ್ನ ಪೂರ್ಣಗೊಳಿಸುವ ಅವಕಾಶವೂ ಇದೆ.
ಪ್ರತಿ ವರ್ಷ ಹಜ್‌ಗೆ ತೆರಳುತ್ತಿದ್ದ ವೃತ್ತಿಪರರು ಹಾಗೂ ಉದ್ಯಮಿಗಳು ಎಲ್ಲಾ ಆಚರಣೆಗಳು, ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಬೇಗನೇ ಭಾರತಕ್ಕೆ ಹಿಂದಿರುಗಲು ಬಯಸುತ್ತಿದ್ದರು. ಸಾಕಷ್ಟು ಆಯ್ಕೆಗಳನ್ನ ಹುಡುಕಾಡುತ್ತಿದ್ದರು. ಈ ಬಗ್ಗೆ ವೃತ್ತಿಪರರು ಹಾಗೂ ಉದ್ಯಮಿಗಳಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಕೇಂದ್ರ ಸರ್ಕಾರ ಈ ಕಿರುಪ್ಯಾಕೇಜ್ ಯಾತ್ರೆಯನ್ನ ಘೋಷಣೆ ಮಾಡಿದೆ. ಈ ಪ್ಯಾಕೇಜ್ ಅಡಿಯಲ್ಲಿ 40 ರಿಂದ 45 ದಿನಗಳ ಕಾಲ ಪೂರೈಸುತ್ತಿದ್ದ ಹಜ್ ಯಾತ್ರೆಯನ್ನು 10 ಸಾವಿರ ಯಾತ್ರಿಕರು 20 ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ. ಹೀಗಾಗಿ ಇನ್ನೂ 20 ದಿನಗಳ ಸಮಯ ಉಳಿತಾಯದೊಂದಿಗೆ ಖರ್ಚು ವೆಚ್ಚವೂ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹಜ್ ಯಾತ್ರೆ ವೆಚ್ಚ ಎಷ್ಟಾಗಬಹುದು?
ಸೌದಿ ಅರೇಬಿಯಾದಲ್ಲಿರುವ ಈ ಹಜ್ ಯಾತ್ರೆಗೆ ಹೋಗುವಾಗ, ಸಂಪೂರ್ಣ ಹಜ್ ಯಾತ್ರೆಯು 40 ದಿನಗಳನ್ನ ತೆಗೆದುಕೊಳ್ಳುತ್ತಿತ್ತು. ಆದ್ರೆ ಈಗ ಕೇಂದ್ರ ಸರ್ಕಾರ ಆರಂಭಿಸಿರುವ 20 ದಿನಗಳ ಪ್ಯಾಕೇಜ್ ಯಾತ್ರೆಯು ಖಾಸಗಿ ಪ್ರವಾಸಕ್ಕಿಂತ ಕೊಂಚ ಕಡಿಮೆ ವೆಚ್ಚ ತಗುಲಲಿದೆ. ಪ್ರತಿ ರಾಜ್ಯಕ್ಕೆ ಅನುಗುಣವಾಗಿ ವೆಚ್ಚಗಳು ವಿಭಿನ್ನವಾಗಿವೆ. ಆದರೆ, ಹಜ್ ಯಾತ್ರೆಗೆ ಸರಾಸರಿ 3 ರಿಂದ 3.5 ಲಕ್ಷ ರೂ ವೆಚ್ಚವಾಗುತ್ತದೆ. ಒಂದು ವೇಳೆ ಖಾಸಗಿ ಮಾರ್ಗದಲ್ಲಿ ಹೋದರೆ 5 ಲಕ್ಷ ರೂ ವೆಚ್ಚವಾಗುತ್ತದೆ. ಇದು ಹೆಚ್ಚು ದಿನಗಳಿಗೆ ಇರುವುದಿಲ್ಲ. ಪ್ಯಾಕೇಜ್ ಅಡಿಯಲ್ಲಿ ಹೋದ್ರೆ 10 ರಿಂದ 20 ದಿನಗಳ ಯಾತ್ರೆಗೆ 6,19,999 ರೂ. ನಿಂದ ಶುರುವಾಗಿ 11,90,000 ರೂ.ವರೆಗಿನ ಪ್ಯಾಕೇಜ್ ಇದೆ. ಇದು ಹೋಟೆಲ್, ಯಾತ್ರೆ ವೆಚ್ಚಗಳನ್ನು ಒಳಗೊಂಡಿರುತ್ತದೆ. 10 ರಿಂದ 13 ದಿನಗಳ ಪ್ಯಾಕೇಜ್‌ಗೆ 6,23,500 ರೂ. ನಿಂದ 7,65,000 ರೂ. ತಗುಲುತ್ತದೆ. ವಿಐಪಿ ಪ್ಯಾಕೇಜ್ ಆದ್ರೆ 11,90,000 ರೂ.ಗಳಷ್ಟಾಗುತ್ತದೆ. 15 ರಿಂದ 20 ದಿನಗಳ ಪ್ಯಾಕೇಜ್ ಆದ್ರೆ 6,19,999 ರೂ. ನಿಂದ 9,35,000 ರೂ.ವರೆಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ಸೌಲಭ್ಯ ಎಲ್ಲೆಲ್ಲಿಂದ ಇದೆ?
ಕಿರು ಪ್ಯಾಕೇಜ್‌ನ ಮೊದಲ ಬ್ಯಾಚ್ ಕೇರಳದ ಕೊಚ್ಚಿಯಿಂದ ಹೊರಟಿದ್ದರೂ, ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಹಾಗೂ ಅಹಮದಾಬಾದ್‌ನಿಂದ ಹೆಚ್ಚುವರಿ ವಿಮಾನಗಳ ಸೌಲಭ್ಯವಿರಲಿದೆ.
ಹಜ್ ಯಾತ್ರೆ ಯಾವಾಗ ಶುರು?
ಬಕ್ರೀದ್ ಹಬ್ಬಕ್ಕೂ ಮುನ್ನವೇ ಅಂದ್ರೆ ಸೌದಿಯಲ್ಲಿ ಅರ್ಧಚಂದ್ರನನ್ನು ನೋಡಿದ ಬಳಿಕ ಹಜ್ ಯಾತ್ರೆ ಆರಂಭವಾಗುತ್ತದೆ. ಈ ಬಾರಿ ಮೇ 18 ರಂದು ಅರ್ಧಚಂದ್ರನ ದರ್ಶನವಾಗಿದೆ. ಮೇ 26 ರಂದು (ಇಂದು) ಅರಫಾ ದಿನವನ್ನ ಆಚರಿಸಲಾಗುತ್ತದೆ. ಮೇ 27 ರಂದು ಈದ್ – ಉಲ್ – ಅಧಾಃ (ಬಕ್ರೀದ್) ಮೇ 27 ರಂದು ಪ್ರಾರಂಭವಾಗಲಿದೆ. ಭಾರತದಲ್ಲಿ ಬಕ್ರೀದ್ ಮೇ 28 ರಂದು ಆಚರಣೆಯಾಗುತ್ತದೆ. ಆದ್ರೆ ಕಾಶ್ಮೀರದಲ್ಲಿ ಮಾತ್ರ ಮೇ 27 ರಂದೇ ಹಬ್ಬ ಆಚರಿಸಲಾಗುತ್ತದೆ.
