– ಭಾರತ ಸೇರಿದಂತೆ 60 ದೇಶಗಳ ಮೇಲೆ ಟ್ಯಾರೀಫ್
– ಬಲವಂತದ ಕಾರ್ಮಿಕರ ಬಳಸಿ ಸರಕು ಉತ್ಪಾದನೆ
ವಾಷಿಂಗ್ಟನ್: ಅಮೆರಿಕದ (USA) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ತನ್ನ ನಿರ್ಧಾರಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ (Donald Trump) ಈಗ ಮತ್ತೊಂದು ಕಾಯ್ದೆ ಬಳಸಿ ಭಾರತ (India) ಸೇರಿದಂತೆ 60 ದೇಶಗಳ ಮೇಲೆ ಸುಂಕ ಸಮರ (Tariff War) ಆರಂಭಿಸುವ ಸುಳಿವು ನೀಡಿದ್ದಾರೆ.
ಬಲವಂತದ ಕಾರ್ಮಿಕ ಪದ್ಧತಿಯ (Forced Labour) ಆಮದನ್ನು ತಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ಅಮೆರಿಕವು ಭಾರತ ಸೇರಿದಂತೆ ಜಗತ್ತಿನ 60 ದೇಶಗಳ ಮೇಲೆ ಹೊಸದಾಗಿ 10% ರಿಂದ 12.5% ರಷ್ಟು ಆಮದು ಸುಂಕ (Tariff) ವಿಧಿಸಲು ಪ್ರಸ್ತಾಪಿಸಿದೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಕಚೇರಿಯು 1974ರ ಯುಎಸ್ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ತನಿಖೆ ನಡೆಸಿ ಈ ಪ್ರಸ್ತಾಪವನ್ನು ಮುಂದಿಟ್ಟಿದೆ.
ಬಲವಂತದ ಕಾರ್ಮಿಕರ (ಜೀತ ಪದ್ಧತಿ) ಮೂಲಕ ಉತ್ಪಾದನೆಯಾಗುವ ಸರಕುಗಳ ಆಮದನ್ನು ಕಾನೂನಾತ್ಮಕವಾಗಿ ಕಟ್ಟುನಿಟ್ಟಾಗಿ ನಿಷೇಧಿಸುವಲ್ಲಿ ಈ ದೇಶಗಳು ವಿಫಲವಾಗಿವೆ ಎಂದು ಅಮೆರಿಕ ಆರೋಪಿಸಿದೆ. ಈ ಪ್ರಸ್ತಾಪ ಜಾರಿಯಾದರೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಗರಿಷ್ಠ 12.5% ರಷ್ಟು ಹೆಚ್ಚುವರಿ ಸುಂಕ ಬೀಳುವ ಸಾಧ್ಯತೆಯಿದೆ. ಬಾಧಿತ ದೇಶಗಳು ಈ ಬಗ್ಗೆ ತಮ್ಮ ಅಭಿಪ್ರಾಯ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಜುಲೈ 6 ರವರೆಗೆ ಕಾಲಾವಕಾಶ ನೀಡಲಾಗಿದೆ
ಈ ಪಟ್ಟಿಯಲ್ಲಿ ಭಾರತದ ಜೊತೆಗೆ ಚೀನಾ, ಬ್ರಿಟನ್ (UK), ಆಸ್ಟ್ರೇಲಿಯಾ, ಜಪಾನ್, ಬಾಂಗ್ಲಾದೇಶ ಸೇರಿದಂತೆ ಒಟ್ಟು 60 ದೇಶಗಳಿವೆ. ಕೆನಡಾ, ಮೆಕ್ಸಿಕೋ, ತೈವಾನ್ ಮತ್ತು ಬ್ರಿಟನ್‌ನಂತಹ ದೇಶಗಳಿಗೆ ಶೇ. 10 ರಷ್ಟು ಸುಂಕ ಪ್ರಸ್ತಾಪಿಸಲಾಗಿದ್ದರೆ, ಭಾರತ ಮತ್ತು ಚೀನಾಕ್ಕೆ ಗರಿಷ್ಠ ಶೇ. 12.5 ರಷ್ಟು ಸುಂಕ ನಿಗದಿಪಡಿಸಲಾಗಿದೆ.
ಈ ಪ್ರಸ್ತಾಪವನ್ನು 1974ರ ಅಮೆರಿಕ ವ್ಯಾಪಾರ ಕಾಯ್ದೆಯ ‘ಸೆಕ್ಷನ್ 301’ ಅಡಿಯಲ್ಲಿ ತರಲಾಗಿದೆ. ಇದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿರುವ ಅಥವಾ ಅನ್ಯಾಯದ ವ್ಯಾಪಾರ ನೀತಿಗಳನ್ನು ಹೊಂದಿರುವ ದೇಶಗಳ ಮೇಲೆ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಸಂಪೂರ್ಣ ಅಧಿಕಾರ ನೀಡುತ್ತದೆ
ಹಿಂದೆ ಟ್ರಂಪ್ ಆಡಳಿತವು ತುರ್ತು ಪರಿಸ್ಥಿತಿ ಕಾಯ್ದೆಯಡಿ ವಿಧಿಸಿದ್ದ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿತ್ತು. ಹೀಗಾಗಿ ನ್ಯಾಯಾಲಯದ ಮಿತಿಗಳನ್ನು ಮೀರಿ ಮತ್ತೆ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲು ಟ್ರಂಪ್ ಆಡಳಿತವು ಈ ‘ಸೆಕ್ಷನ್ 301’ ಮಾರ್ಗವನ್ನು ಬಳಸಿಕೊಂಡಿದೆ.
54 ದೇಶಗಳಿಗೆ 12.5% ಸುಂಕ
ಬಲವಂತದ ಕಾರ್ಮಿಕರ ಆಮದು ನಿಷೇಧವನ್ನು ಜಾರಿಗೆ ತರಲು ಯಾವುದೇ ದೃಢವಾದ ಕಾನೂನು ಹೊಂದಿರದ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಮತ್ತು ಬ್ರಿಟನ್ ಸೇರಿದಂತೆ 54 ದೇಶಗಳಿಗೆ ಗರಿಷ್ಠ 12.5% ರಷ್ಟು ಹೆಚ್ಚುವರಿ ಸುಂಕ ಪ್ರಸ್ತಾಪಿಸಲಾಗಿದೆ.
6 ದೇಶಗಳಿಗೆ 10% ರಷ್ಟು ಸುಂಕ
ಈಗಾಗಲೇ ಸ್ವಲ್ಪ ಮಟ್ಟದ ಕಾನೂನು ನಿಯಂತ್ರಣ ಹೊಂದಿರುವ ಅಥವಾ ಅಮೆರಿಕದೊಂದಿಗೆ ಪರಸ್ಪರ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಕೆನಡಾ, ಮೆಕ್ಸಿಕೋ, ಯೂರೋಪಿಯನ್ ಯೂನಿಯನ್ (EU), ಪಾಕಿಸ್ತಾನ, ಈಕ್ವೆಡಾರ್ ಮತ್ತು ಇಂಡೋನೇಷ್ಯಾ ದೇಶಗಳಿಗೆ 10% ರಷ್ಟು ಸುಂಕ ವಿಧಿಸಲು ನಿರ್ಧರಿಸಲಾಗಿದೆ.
ಭಾರತ ಸೇರಿದಂತೆ ಈ ದೇಶಗಳು ತಮ್ಮ ದೇಶದೊಳಗೆ ಬಲವಂತದ ಕಾರ್ಮಿಕ ಪದ್ಧತಿಯ ಮೂಲಕ ತಯಾರಾಗುವ ಅಥವಾ ಇತರ ದೇಶಗಳಿಂದ ಅಂತಹ ಸರಕುಗಳು ಆಮದಾಗುವುದನ್ನು ತಡೆಯಲು ಕಟ್ಟುನಿಟ್ಟಾದ ಕಾನೂನು ಜಾರಿಗೊಳಿಸಿಲ್ಲ ಎಂದು ಅಮೆರಿಕದ ರಾಯಭಾರಿ ಜಾಮೀಸನ್ ಗ್ರೇರ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಕೆಲ ವಸ್ತುಗಳಿಗೆ ರಿಯಾಯಿತಿ:
ಗ್ರಾಹಕರಿಗೆ ಮತ್ತು ಅಮೆರಿಕದ ಉದ್ಯಮಗಳಿಗೆ ತೊಂದರೆಯಾಗದಂತೆ ತಡೆಯಲು ಟ್ರಂಪ್ ಆಡಳಿತವು ಕೆಲವು ಅಗತ್ಯ ವಸ್ತುಗಳಿಗೆ ಈ ಸುಂಕದಿಂದ ವಿನಾಯಿತಿ ನೀಡಿದೆ. ಇಂಧನ , ಅಪರೂಪದ ಖನಿಜಗಳು (Rare Earths), ಗೋಮಾಂಸ (Beef), ಕಾಫಿ, ಕೆಲವು ನಿರ್ದಿಷ್ಟ ಹಣ್ಣು ಮತ್ತು ತರಕಾರಿಗಳು, ಔಷಧಗಳು (Pharmaceuticals), ಆರ್ಗಾನಿಕ್ ಕೆಮಿಕಲ್ಸ್ ಹಾಗೂ ವಿಮಾನದ ಬಿಡಿಭಾಗಗಳನ್ನು ಹೊರಗಡೆ ಇಡಲಾಗಿದೆ
ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು (BTA) ಅಂತಿಮಗೊಳಿಸಲು ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ನೇತೃತ್ವದ ನಿಯೋಗವು ದೆಹಲಿಯಲ್ಲಿ ಜೂನ್ 1 ರಿಂದ 4 ರವರೆಗೆ ಪ್ರಮುಖ ಮಾತುಕತೆ ನಡೆಸುತ್ತಿದೆ. ಈ ಒಪ್ಪಂದದ ಅಡಿಯಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು. 18ಕ್ಕೆ ಇಳಿಸಲು ಈ ಹಿಂದೆ ಚರ್ಚಿಸಲಾಗಿತ್ತು. ಮಾತುಕತೆ ನಡೆಯುತ್ತಿರುವಾಗಲೇ ಅಮೆರಿಕ ಈ ಹೊಸ ಬಾಂಬ್ ಸಿಡಿಸಿರುವುದು ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.


