ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ರಾಜ್ಯದಲ್ಲಿ ಮದ್ಯಪಾನ ನಿಯಂತ್ರಣಕ್ಕೆ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ದೇವಾಲಯಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗೆ ಇರುವ 717 ಸರ್ಕಾರಿ ಮದ್ಯದಂಗಡಿಗಳನ್ನು ಎರಡು ವಾರಗಳೊಳಗೆ ಮುಚ್ಚಲು ಅವರು ಆದೇಶ ನೀಡಿದ್ದಾರೆ.
ರಾಜ್ಯ ಸರ್ಕಾರದ ಅಧೀನದಲ್ಲಿರುವ TASMAC (ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೋರೇಷನ್) ಮೂಲಕ ಈ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ಮಾಹಿತಿ ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ ಒಟ್ಟು 4,765 ಟಿಎಎಸ್‌ಎಮ್‌ಎಸಿ ಅಂಗಡಿಗಳಿದ್ದು, ಅವುಗಳಲ್ಲಿ 276 ದೇವಾಲಯಗಳ ಸಮೀಪ, 186 ಶಿಕ್ಷಣ ಸಂಸ್ಥೆಗಳ ಬಳಿ ಹಾಗೂ 255 ಬಸ್ ನಿಲ್ದಾಣಗಳ ಬಳಿ ಇವೆ. ಇದನ್ನೂ ಓದಿ: ಎಂ.ಕೆ.ಸ್ಟಾಲಿನ್ ಭೇಟಿಯಾದ ತಮಿಳುನಾಡು ನೂತನ ಸಿಎಂ ವಿಜಯ್
ಮುಖ್ಯಮಂತ್ರಿ ಸ್ಥಾನಕ್ಕೇರಿದ ತಕ್ಷಣವೇ ವಿಜಯ್ ಈ ಮಹತ್ವದ ಆದೇಶ ಹೊರಡಿಸಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರ ಹಿತ ಹಾಗೂ ಯುವಜನರನ್ನು ವ್ಯಸನದಿಂದ ದೂರವಿಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ವ್ಯಸನ ಮುಕ್ತ ತಮಿಳುನಾಡು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಲಾಗಿದೆ.
ಇನ್ನೊಂದೆಡೆ, ಟಿಎಎಸ್‌ಎಮ್‌ಸಿ ಮೇಲೆ ಜಾರಿ ನಿರ್ದೇಶನಾಲಯದ (ED) ತನಿಖೆಯೂ ಮುಂದುವರಿದಿದೆ. ಕಳೆದ ವರ್ಷ ಹಣ ವರ್ಗಾವಣೆ ಹಾಗೂ ಟೆಂಡರ್ ಅಕ್ರಮಗಳ ಆರೋಪದಡಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಟಿಎಎಸ್‌ಎಮ್‌ಸಿ ಮಳಿಗೆಗಳಲ್ಲಿ ಪ್ರತಿ ಬಾಟಲಿಗೆ ಹೆಚ್ಚುವರಿ ಹಣ ವಸೂಲಿ, ಟೆಂಡರ್ ಅಕ್ರಮ ಮತ್ತು ಸುಮಾರು 1,000 ಕೋಟಿ ರೂ. ಮೌಲ್ಯದ ಲೆಕ್ಕವಿಲ್ಲದ ಹಣದ ವ್ಯವಹಾರ ನಡೆದಿದೆ ಎಂದು ಇಡಿ ಆರೋಪಿಸಿತ್ತು. ಇದನ್ನೂ ಓದಿ: ನೀವು ಇತಿಹಾಸ ಸೃಷ್ಟಿ ಮಾಡಿದ್ದೀರಿ – ಕರೆ ಮಾಡಿ ವಿಜಯ್‌ಗೆ ಸಿದ್ದರಾಮಯ್ಯ ಅಭಿನಂದನೆ
ಈ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ತಲುಪಿದ್ದು, ರಾಜ್ಯ ಸರ್ಕಾರದ ಅಧಿಕಾರಕ್ಕೆ ಕೇಂದ್ರ ತನಿಖಾ ಸಂಸ್ಥೆಗಳು ಹಸ್ತಕ್ಷೇಪ ಮಾಡುತ್ತಿರುವ ಕುರಿತು ನ್ಯಾಯಾಲಯ ಪ್ರಶ್ನೆ ಎತ್ತಿತ್ತು. ಆಗಿನ ಡಿಎಂಕೆ ಸರ್ಕಾರ ಇದನ್ನು ರಾಜಕೀಯ ಸೇಡು ಎಂದು ಟೀಕಿಸಿತ್ತು.
ರಾಜ್ಯದ ಆದಾಯದಲ್ಲಿ TASMAC ಮದ್ಯ ಮಾರಾಟ ದೊಡ್ಡ ಪಾತ್ರವಹಿಸುತ್ತಿದೆ. 2025ರಲ್ಲಿ ಮದ್ಯ ಮಾರಾಟದಿಂದ ತಮಿಳುನಾಡು ಸರ್ಕಾರಕ್ಕೆ 48,000 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿತ್ತು. ಆದರೂ ಜನಹಿತದ ದೃಷ್ಟಿಯಿಂದ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.ಇದನ್ನೂ ಓದಿ: ಜಯಾ ಪಕ್ಷದಲ್ಲಿ ಬಿರುಕು – ಎರಡು ಹೋಳಾಗುತ್ತಾ AIADMK?

