ಗುರುತೇಜ್ ಶೆಟ್ಟಿ (Gurutej Shetty) ನಿರ್ದೇಶನದಲ್ಲಿ ಕಿರಣ್ ರಾಜ್ (Kiran Raj) ನಾಯಕನಾಗಿ ಅಭಿನಯಿಸಿರುವ ಜಾಕಿ 42 (Jockey 42) ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಮುತ್ತು ಮುತ್ತು ಮಾತಾಯಿತ ಎನ್ನುವ ರೊಮ್ಯಾಂಟಿಕ್ ಲವ್ ಸಾಂಗ್ ಈ ಚಿತ್ರದ ಮೊದಲ ಗೀತೆಯಾಗಿ ಬಿಡುಗಡೆಯಾಗಿದ್ದು, ನಾಗಾರ್ಜುನ ಶರ್ಮ ಈ ಸುಂದರ ಪ್ರೇಮಗೀತೆಯನ್ನು ಬರೆದಿದ್ದಾರೆ. ವಿನೋದ್ ಯಜಮಾನ್ಯ ಸಂಗೀತ ನೀಡಿದ್ದಾರೆ. ಖ್ಯಾತ ಬಾಲಿವುಡ್ ಗಾಯಕರಾದ ಅರ್ಮಾನ್ ಮಲ್ಲಿಕ್ ಹಾಗೂ ಪಾಲಕ್ ಮುಚ್ಚಲ್ ಹಾಡಿದ್ದಾರೆ.
ಗೋಲ್ಡನ್ ಗೇಟ್ ಸ್ಟುಡಿಯೋ ಲಾಂಛನದಲ್ಲಿ ಭಾರತಿ ಸತ್ಯನಾರಾಯಣ ಈ ಚಿತ್ರವನ್ನು ನಿರ್ಮಿಸಿದ್ದು, ಗುರುತೇಜ್ ಶೆಟ್ಟಿ ಕಥೆ-ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಈ ಚಿತ್ರ ತಯಾರಾಗಿದ್ದು, ಭಾರತೀಯ ಚಿತ್ರ ರಂಗದಲ್ಲೇ ಪೂರ್ಣ ಪ್ರಮಾಣದ ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಬರುತ್ತಿರುವ ಚಿತ್ರ ಇದಾಗಿದೆ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರದ ಮೇಕಿಂಗ್ ಬಗ್ಗೆ ಬರವಸೆ ಮೂಡಿಸಿದೆ. ಈಗ ಬಿಡುಗಡೆಯಾಗಿರುವ ಮೊದಲ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಇದನ್ನೂ ಓದಿ: ಜನ ನಾಯಗನ್ ಮರು ಸೆನ್ಸಾರ್| 24 ಸೆಕೆಂಡ್ ಸೇರ್ಪಡೆ – ರನ್‌ಟೈಮ್ ಎಷ್ಟು ಗೊತ್ತಾ?
ಕಿರಣ್ ರಾಜ್, ಹೃತಿಕ ಶ್ರೀನಿವಾಸ್, ಯುಕ್ತ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂದನ್ ರಾವ್, ಗಿರೀಶ್ ಹೆಗ್ಡೆ ಅರುಣ್ ಆಚಾರ್ ಮುಂತಾದ ಕಲಾವಿದರು ತಾರಾಗಣದಲ್ಲಿದ್ದಾರೆ. ರಾಘವೇಂದ್ರ ಕೋಲಾರ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನವಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಲಿದೆ.
