ಚೆನ್ನೈ: ಚಾಮರಾಜನಗರದ (Chamarajanagara) ಹನೂರು (Hanur) ತಾಲೂಕಿನ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಅರಣ್ಯಾಧಿಕಾರಿಗಳ ಗುಂಡೇಟಿಗೆ ಬಲಿಯಾದ ಮೂವರು ತಮಿಳಿಗರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ತಮಿಳುನಾಡು (Tamil Nadu) ಸರ್ಕಾರ ಘೋಷಿಸಿದೆ.
ಅರಣ್ಯ ಸಚಿವ ರಂಜಿತ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಸೂಚನೆಯ ಮೇರೆಗೆ ತಮಿಳುನಾಡು ಅರಣ್ಯ ಇಲಾಖೆಯು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೃತಪಟ್ಟ ಮೂವರು ತಮಿಳರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಮೂವರ ಎನ್‌ಕೌಂಟರ್ ಕೇಸ್ – ಅರಣ್ಯಾಧಿಕಾರಿಗಳಿಂದ ವಸ್ತು ಜಪ್ತಿ, ಹಲವು ಅನುಮಾನ

ಕಾನೂನು ಸಚಿವ ಸಿ.ಟಿ.ಆರ್.ನಿರ್ಮಲ್ ಕುಮಾರ್, ಈ ವಿಷಯವನ್ನು ಕಳೆದ ಮೂರು ದಿನಗಳಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗಿತ್ತು. ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ಅರಣ್ಯ ಸಚಿವರು ಸೂಚಿಸಿದಂತೆ, ವಿಷಯವು ಪರಿಶೀಲನೆಯಲ್ಲಿದೆ. ಸಿಎಂ ಅದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಪ್ರಕರಣವು ಪ್ರಸ್ತುತ ನ್ಯಾಯಾಂಗ ವಿಚಾರಣೆಯಲ್ಲಿದೆ. ಆದ್ದರಿಂದ, ತಮಿಳುನಾಡು ಸರ್ಕಾರವು ಮುಂದಿನ ಕೆಲವು ದಿನಗಳಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ (Shanghya Forest Area) ಆ.15ರ ಮುಂಜಾನೆ ಅರಣ್ಯಾಧಿಕಾರಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಬೇಟೆಗಾರರು ಮೃತಪಟ್ಟಿದ್ದರು. ಮೂವರ ಸಾವಿಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಹನೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ಆ ಮೂವರು ಬೇಟೆಗಾಗಿ ಅರಣ್ಯ ಪ್ರವೇಶಿಸಿದ್ದರು ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಹನೂರು ಶೂಟೌಟ್| ಸ್ವಗ್ರಾಮಗಳಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಕ್ರಿಯೆ; ಕುಟುಂಬಗಳಿಗೆ ತಲಾ 15 ಲಕ್ಷ ಪರಿಹಾರ ವಿತರಣೆ

