ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Tamil Nadu CM Vijay) ಅವರು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ. ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಸಂಬಂಧಿಸಿದ ಗರಿಷ್ಠ ವಯೋಮಿತಿಯನ್ನ 5 ವರ್ಷಗಳ ಕಾಲ ಸಡಿಲಿಕೆ (Age Relaxation) ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಈ ಸೌಲಭ್ಯವು ಇಂದಿನಿಂದ 5 ವರ್ಷಗಳವರೆಗೆ ಜಾರಿಯಲ್ಲಿರಲಿದೆ.
ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಭ್ಯರ್ಥಿಗಳ ಮನವಿ ಪರಿಗಣಿಸಿದ ಮುಖ್ಯಮಂತ್ರಿ ವಿಜಯ್ ಅವರು 5 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆಗೆ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಈಗಾಗಲೇ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಅನ್ವಯವಾಗುತ್ತಿರುವ ವಯೋಮಿತಿ ಸಡಿಲಿಕೆಗಳ ಜೊತೆಗೆ ಈ ಹೆಚ್ಚುವರಿ ಐದು ವರ್ಷಗಳ ವಿನಾಯಿತಿಯೂ ಅನ್ವಯವಾಗಲಿದೆ. ಅಂದರೆ, ಪ್ರಸ್ತುತ ಜಾರಿಯಲ್ಲಿರುವ ವಯೋಮಿತಿ ಸಡಿಲಿಕೆಗಳನ್ನ ರದ್ದುಗೊಳಿಸದೇ, ಅದರ ಜೊತೆಗೆ ಹೊಸದಾಗಿ 5 ವರ್ಷಗಳ ವಿನಾಯಿತಿ ನೀಡಲಾಗಿದೆ.
ಯಾರಿಗೆ ಈ ಸೌಲಭ್ಯ ಅನ್ವಯ?
ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗೆ ಪ್ರಸ್ತುತ ಜಾರಿಯಲ್ಲಿರುವ ಗರಿಷ್ಠ ವಯೋಮಿತಿಯನ್ನ ತಲುಪುತ್ತಿರುವ ಅಭ್ಯರ್ಥಿಗಳಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ಮೀಸಲಾತಿ ಅಥವಾ ಇತರ ನೇಮಕಾತಿ ನಿಯಮಗಳ ಅಡಿಯಲ್ಲಿ ವಯೋಮಿತಿ ಸಡಿಲಿಕೆ ಪಡೆಯುತ್ತಿರುವ ಅಭ್ಯರ್ಥಿಗಳಿಗೂ ಹೆಚ್ಚುವರಿ 5 ವರ್ಷಗಳ ವಿನಾಯಿತಿ ಅನ್ವಯವಾಗಲಿದೆ.

