Tuesday, 21st January 2020

Recent News

ಮರ್ಯಾದಾ ಹತ್ಯೆ: ತಮ್ಮ, ಆತನ ಗೆಳತಿಯನ್ನು ಕೊಂದ ಅಣ್ಣ

ಚೆನ್ನೈ: ಅಣ್ಣನೊಬ್ಬ ದಲಿತ ಯುವತಿಯನ್ನು ಮದುವೆಯಾಗಲು ಬಯಸಿದ್ದ ತಮ್ಮ ಹಾಗೂ ಆತನ ಗೆಳತಿಯನ್ನು ಹತ್ಯೆ ಮಾಡಿದ ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ವರ್ಷಿನಿ ಪ್ರಿಯಾ (17) ಮತ್ತು ಕನಗರಾಜ್ (22) ಕೊಲೆಯಾದ ಪ್ರೇಮಿಗಳು. ವಿನೋತ್ ಕೊಲೆ ಮಾಡಿದ ಆರೋಪಿ. ಮೆಟ್ಟುಪಾಳಯಂನಲ್ಲಿ ಜೂನ್ 25ರಂದು ಘಟನೆ ನಡೆದಿದ್ದು, ಸ್ಥಳದಲ್ಲಿಯೇ ಕನಗರಾಜ್ ಸಾವನ್ನಪ್ಪಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ವರ್ಷಿನಿ ಪ್ರಿಯಾ ಶನಿವಾರ ಮೃತಪಟ್ಟಿದ್ದಾಳೆ.

ವರ್ಷಿನಿ ಪ್ರಿಯಾ ಹಾಗೂ ಕನಗರಾಜ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲೂ ಕೂಡ ನಿರ್ಧಸಿದ್ದರು. ಆದರೆ ವರ್ಷಿನಿ ಅರುಂಡತಿಯಾರ್ ಎಂಬ ಪರಿಶಿಷ್ಟ ಜಾತಿಯ ಹುಡುಗಿ ಕನಗರಾಜ್ ಮೇಲ್ವರ್ಗದ ಜಾತಿಗೆ ಸೇರಿದ ಯುವಕನಾಗಿದ್ದರಿಂದ ಇಬ್ಬರ ಮದುವೆಗೆ ವಿರೋಧ ವ್ಯಕ್ತವಾಗಿತ್ತು.

ಇಬ್ಬರ ಪೋಷಕರು ವರ್ಷಿನಿ ಹಾಗೂ ಕನಗರಾಜ್ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಕ್ರಮೇಣವಾಗಿ ಕನಗರಾಜ್ ಮನೆಯವರು ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡು ಶೀಘ್ರವೇ ಮದುವೆ ಮಾಡಲು ನಿರ್ಧರಿದ್ದರು. ಆದರೆ ಕನಗರಾಜ್ ಅಣ್ಣ ವಿನೋತ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದನು.

ವರ್ಷಿನಿ ಹಾಗೂ ಕನಗರಾಜ್ ಜೂನ್ 25ರಂದು ಒಟ್ಟಿಗೆ ಬರುತ್ತಿದ್ದರು. ಈ ವೇಳೆ ಅವರ ಬಳಿಗೆ ಬಂದ ವಿನೋತ್ ಗಲಾಟೆ ಮಾಡಲು ಆರಂಭಿಸಿದ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ವಿನೋತ್ ತನ್ನ ಬಳಿಯಿದ್ದ ಚಾಕುವಿಂದ ಪ್ರೇಮಿಗಳ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಕನಗರಾಜ್ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದ. ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ವರ್ಷಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾಳೆ.

ವಿನೋತ್‍ನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯ ವಿರುದ್ಧ ಐಪಿಸಿ ಸೆಕ್ಸನ್ 302 (ಕೊಲೆ), 307 (ಕೊಲೆಗೆ ಯತ್ನ) ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *