ಮೈಸೂರು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ (Nanjanagud) ನಂಜುಂಡೇಶ್ವರ ದೇಗುಲದ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಭಾರೀ ಅಕ್ರಮದ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ನಂಜುಂಡೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.
ದೇವಾಲಯದ ಲೆಕ್ಕಪತ್ರದಲ್ಲಿನ ಖರ್ಚು-ವೆಚ್ಚಗಳನ್ನು ಪರಿಶೀಲಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಶಾಕ್ ಆಗಿದ್ದಾರೆ. 2024-25ನೇ ಸಾಲಿನಲ್ಲಿ ದೇವಾಲಯಕ್ಕೆ 25.86 ಕೋಟಿ ರೂ. ಆದಾಯ ಬಂದಿದ್ದು, 25.68 ಕೋಟಿ ರೂ. ವೆಚ್ಚವಾಗಿದೆ. ಕೇವಲ 17.84 ಲಕ್ಷ ರೂ. ಉಳಿತಾಯವಾಗಿದ್ದು, ಅಧಿಕಾರಿಗಳು ತೋರಿಸುತ್ತಿರುವ ಈ ಲೆಕ್ಕದ ಮೇಲೆ ಭಾರೀ ಅನುಮಾನ ವ್ಯಕ್ತವಾಗಿದೆ. ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ 4 ಕೋಟಿ ರೂ.ಗೂ ಹೆಚ್ಚು ಉಳಿತಾಯವಾಗುತ್ತಿತ್ತು ಮತ್ತು 2025-26ರಲ್ಲೂ ಮತ್ತೆ 4 ಕೋಟಿ ರೂ. ಉಳಿತಾಯವಾಗಿದೆ. ಆದರೆ 2024-25ರಲ್ಲಿ ಮಾತ್ರ ಇಷ್ಟು ಕಡಿಮೆ ಉಳಿತಾಯವಾಗಲು ಕಾರಣವೇನು ಎಂಬ ಗಂಭೀರ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಇಂದಿನಿಂದ ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ
ಒಂದೇ ಹೊತ್ತು ಪ್ರಸಾದ ವಿತರಣೆ ಇದ್ದ ವರ್ಷದಲ್ಲಿ 73 ಲಕ್ಷ ರೂ. ಖರ್ಚಾಗಿದೆ. ಆದರೆ, ಮೂರು ಹೊತ್ತು ಪ್ರಸಾದ ನೀಡಿದ ಮುಂದಿನ ವರ್ಷದಲ್ಲಿ ಕೇವಲ 46 ಲಕ್ಷ ರೂ. ಖರ್ಚು ತೋರಿಸಿರುವುದು ಅನುಮಾನಾಸ್ಪದವಾಗಿದೆ. ಅಲ್ಲದೇ ಭಕ್ತರಿಂದ ಹಾಲು-ಮೊಸರು ಕೊಡುಗೆಯಾಗಿ ಬರುತ್ತಿದ್ದರೂ ಸಹ, 3.18 ಲಕ್ಷ ರೂ.ಗಳ ಖರೀದಿ ತೋರಿಸಲಾಗಿದೆ.
ವಿವಿಧ ವೆಚ್ಚಗಳ ಪೈಕಿ ಲಾಡು ಖರೀದಿಗೆ 3.50 ಕೋಟಿ ರೂ., ಬಾಳೆಹಣ್ಣಿಗೆ 6.55 ಲಕ್ಷ ರೂ., ಶಾಮಿಯಾನಕ್ಕೆ 17.84 ಲಕ್ಷ ರೂ., ಪಾರ್ಕಿಂಗ್‌ಗೆ 37.88 ಲಕ್ಷ ರೂ., ಮತ್ತು ಸಿಸಿ ಕ್ಯಾಮೆರಾ ದುರಸ್ತಿಗೆ 29.89 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದ ಕಳಲೆ ದೇವಸ್ಥಾನಕ್ಕೆ 18 ಲಕ್ಷ ರೂ. (14 ಲಕ್ಷ ರೂ. ಕಾಮಗಾರಿ + 4 ಲಕ್ಷ ರೂ. ಜಾತ್ರೆ) ಖರ್ಚು ತೋರಿಸಿರುವುದು ಕೂಡ ಸಂಶಯಾಸ್ಪದವಾಗಿದೆ.
ಲೆಕ್ಕಪತ್ರ ಪರಿಶೀಲನೆ ಬಳಿಕ 4 ರಿಂದ 5 ಕೋಟಿ ರೂ. ದುರುಪಯೋಗವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರೈತ ಮುಖಂಡರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ನೇಪಾಳ ಜಲಪ್ರಳಯಕ್ಕೆ 160 ಮಂದಿ ಬಲಿ – 150 ಕಿ.ಮೀ ದೂರದಲ್ಲಿ 33 ಶವ ಪತ್ತೆ
