ನವದೆಹಲಿ/ಮುಂಬೈ: ದೇಶದಲ್ಲಿ ಮುಂಬರುವ ಹಬ್ಬದ ಋತುವಿನಲ್ಲಿ ಸಕ್ಕರೆ ಬೆಲೆ (Sugar Price) ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು ಒಂದು ದಶಕದ ಬಳಿಕ ಇದೇ ಮೊದಲ ಬಾರಿಗೆ 10 ಲಕ್ಷ ಮೆಟ್ರಿಕ್ ಟನ್ (1 ಮಿಲಿಯನ್ ಟನ್) ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ (Duty-Free) ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಸರ್ಕಾರದ ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ (Share Market) ಪ್ರಮುಖ ಸಕ್ಕರೆ ಉತ್ಪಾದನಾ ಕಂಪನಿಗಳ ಷೇರುಗಳು ಶೇ. 5ರವರೆಗೆ ಭಾರಿ ಕುಸಿತ ಕಂಡಿವೆ. ಸರ್ಕಾರದ ಆದೇಶದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆ ಹೆಚ್ಚಾಗಿ, ಬೆಲೆಗಳು ಮತ್ತು ಕಂಪನಿಗಳ ಲಾಭಾಂಶ ಕಡಿಮೆಯಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿದೆ. ಪರಿಣಾಮವಾಗಿ ಪ್ರಮುಖ ಕಂಪನಿಗಳ ಷೇರುಗಳಲ್ಲಿ ತೀವ್ರ ಇಳಿಕೆ ದಾಖಲಾಗಿದೆ
ಯಾವುದು ಎಷ್ಟು ಇಳಿಕೆ?
ಬಲರಾಂಪುರ್ ಚೀನಿ ಮಿಲ್ಸ್ (Balrampur Chini), ಧಾಂಪುರ್ ಶುಗರ್ ಮಿಲ್ಸ್, ಬಜಾಜ್ ಹಿಂದುಸ್ತಾನ್ ಶುಗರ್ ಷೇರುಗಳ ಮೌಲ್ಯ ಶೇ. 5ರಷ್ಟು ಇಳಿಕೆಯಾಗಿದ್ದರೆ ದಾಲ್ಮಿಯಾ ಭಾರತ್ ಶುಗರ್ ಮತ್ತು ಈದ್ ಪ್ಯಾರಿ ಶೇ. 3ರಿಂದ 6ರವರೆಗೆ ಕುಸಿತ ಕಂಡಿದೆ.
ಯಾಕೆ ಈ ನಿರ್ಧಾರ?
ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿತಿಂಡಿ ತಯಾರಿಕೆಗೆ ಸಕ್ಕರೆ ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತದೆ. ಕಳೆದ ಎರಡು ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಶೇ. 40ರಷ್ಟು ಏರಿಕೆಯಾಗಿತ್ತು.ಅಸಮರ್ಪಕ ಮಳೆಯಿಂದಾಗಿ ಕಬ್ಬು ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿತ್ತು.

ಸಾಮಾನ್ಯವಾಗಿ ಭಾರತದಲ್ಲಿ ಸಕ್ಕರೆ ಆಮದಿನ ಮೇಲೆ ಶೇ. 100 ರಷ್ಟು ಆಮದು ಸುಂಕ ಇರುತ್ತದೆ. ಆದರೆ ಪ್ರಸ್ತುತ ಬೆಲೆ ನಿಯಂತ್ರಣಕ್ಕಾಗಿ ಸುಂಕ ದರದ ಕೋಟಾ (TRQ) ಅಡಿಯಲ್ಲಿ ಯಾವುದೇ ತೆರಿಗೆ ಇಲ್ಲದೆ 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಅನುಮತಿಸಲಾಗಿದೆ.
ಕಚ್ಚಾ ಸಕ್ಕರೆಯನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಸಕ್ಕರೆ ಗಿರಣಿಗಳು ಮತ್ತು ರಿಫೈನರ್‌ಗಳು ಆನ್‌ಲೈನ್ ಮೂಲಕ ಆಗಸ್ಟ್ 21 ರಿಂದ ಆಗಸ್ಟ್ 28 ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಕ್ಟೋಬರ್ 15ರೊಳಗೆ ಆಮದು ಪ್ರಕ್ರಿಯೆ ಮುಗಿಸುವ ಆಮದುದಾರರಿಗೆ ಆದ್ಯತೆ ನೀಡಲಾಗುತ್ತದೆ.
ಕೃತಕ ಅಭಾವ ಮತ್ತು ದಾಸ್ತಾನು ಮಾಡುವುದನ್ನು ತಡೆಯಲು ಸರ್ಕಾರ ಬಿಗಿಯಾದ ಕ್ರಮ ಕೈಗೊಂಡಿದೆ. ತಿಂಗಳಿಗೆ 10 ಟನ್‌ಗಿಂತ ಹೆಚ್ಚು ಸಕ್ಕರೆ ಬಳಸುವ ಬೃಹತ್ ಗ್ರಾಹಕರು (ಉದಾಹರಣೆಗೆ ಮಿಠಾಯಿ ತಯಾರಕರು, ತಂಪು ಪಾನೀಯ ಸಂಸ್ಥೆಗಳು) ತಮ್ಮ 15 ದಿನಗಳ ಬಳಕೆಗೆ ಬೇಕಾಗುವಷ್ಟು ಮಾತ್ರ ದಾಸ್ತಾನು ಇಟ್ಟುಕೊಳ್ಳಬಹುದು. ಈ ನಿಯಮವು ಸೆಪ್ಟೆಂಬರ್ 1 ರಿಂದ ನವೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ.
ದೇಶೀಯವಾಗಿ ಕಬ್ಬಿನ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಕೇವಲ ಎರಡು ತಿಂಗಳಲ್ಲಿ ಸಕ್ಕರೆ ಬೆಲೆ ಶೇ. 40 ರಷ್ಟು ಏರಿಕೆಯಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಗಳು ಪ್ರತಿ ಕೆಜಿಗೆ 52 ರೂ. ದಾಟಿದ್ದರಿಂದ ಗ್ರಾಹಕರಿಗೆ ಹೊರೆಯಾಗದಂತೆ ತಡೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ.
ಹೊಸ ಸಕ್ಕರೆ ಹಂಗಾಮು (2026-27) ಆರಂಭವಾಗುವ ಮುನ್ನ ದೇಶದಲ್ಲಿ ಸಕ್ಕರೆಯ ಆರಂಭಿಕ ದಾಸ್ತಾನು ಅಂದಾಜು ಅಗತ್ಯತೆಗಿಂತ ಕಡಿಮೆ ಇರುವುದರಿಂದ ಸರ್ಕಾರ ಈ ತುರ್ತು ಕ್ರಮ ಕೈಗೊಂಡಿದೆ.

