ಮಡಿಕೇರಿ: ರೈತರ ವಿರೋಧದ ನಡುವೆಯೂ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಯಾವುದೇ ಮುನ್ಸೂಚನೆ ನೀಡದೆ ಸುಮಾರು 3 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಲಾಗಿದೆ ಎಂದು ಕೊಡಗಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಕರ್ನಾಟಕದ ರೈತರಿಗೆ ಕಟ್ಟುಪದ್ಧತಿಯಲ್ಲಿ ಮಾತ್ರ ನೀರು ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಮತ್ತೊಂದೆಡೆ ತಮಿಳುನಾಡಿಗೆ ಮಾತ್ರ ಏಕಾಏಕಿ ನೀರು ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಬೇಸಿಗೆಗೂ ಮುನ್ನವೇ ನೀರು ಹೊರಬಿಟ್ಟರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಹಾರಂಗಿಯಿಂದ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ?
ಕೊಡಗಿನ ಹಾರಂಗಿ ಜಲಾಶಯ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ನೀರು ಬಿಡುಗಡೆ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಸುಮಾರು 3 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ ಎನ್ನಲಾಗಿದ್ದು, ಸರ್ಕಾರದ ಕ್ರಮಕ್ಕೆ ರೈತರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ರಾಜ್ಯ ಸರ್ಕಾರ ರೈತರಿಗೆ ಹಲವು ಎಚ್ಚರಿಕೆಗಳನ್ನು ನೀಡುತ್ತಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ದೀರ್ಘಾವಧಿ ಬೆಳೆಗಳನ್ನು ಬೆಳೆಯಬೇಡಿ. ನೀರಿನ ಲಭ್ಯತೆ ನೋಡಿಕೊಂಡು ಕೃಷಿ ಮಾಡಿ. ಕಟ್ಟುಪದ್ಧತಿಯಲ್ಲಿ ಮಾತ್ರ ನೀರು ಹರಿಸಲಾಗುವುದು ಎಂದು ಹೇಳಲಾಗುತ್ತಿದೆ.
ಆದರೆ, ಇತ್ತ ಹಾರಂಗಿ ಜಲಾಶಯದಿಂದ ಯಾವುದೇ ಮುನ್ಸೂಚನೆ ಇಲ್ಲದೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎನ್ನುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. “ರೈತರಿಗೆ ಒಂದು ನಿಯಮ, ತಮಿಳುನಾಡಿಗೆ ಮತ್ತೊಂದು ನಿಯಮನಾ?” ಎಂದು ಕೃಷಿಕರು ಪ್ರಶ್ನಿಸುತ್ತಿದ್ದಾರೆ.
ಹಾರಂಗಿಯಲ್ಲಿ 6.03 ಟಿಎಂಸಿ ನೀರು ಸಂಗ್ರಹ
ಹಾರಂಗಿ ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 8.5 ಟಿಎಂಸಿ ಅಡಿ. ಸದ್ಯ ಜಲಾಶಯದಲ್ಲಿ ಸುಮಾರು 6.03 ಟಿಎಂಸಿ ಅಡಿ ನೀರು ಇದೆ ಎನ್ನಲಾಗಿದೆ. ಜಲಾಶಯಕ್ಕೆ ಒಳಹರಿವು ಕೇವಲ 101 ಕ್ಯೂಸೆಕ್‌ನಷ್ಟಿದೆ.
ಇದರ ಜೊತೆಗೆ ಜಲಾಶಯದಲ್ಲಿರುವ ಸುಮಾರು ಒಂದು ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ನಿಜವಾಗಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.
ಇಂತಹ ಸಂದರ್ಭದಲ್ಲಿ ಸಾವಿರಾರು ಕ್ಯೂಸೆಕ್ ನೀರನ್ನು ಹೊರಗೆ ಹರಿಸುವುದರಿಂದ ಮುಂದಿನ ದಿನಗಳಲ್ಲಿ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆಯಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ: ಶಿವ-ಪಾರ್ವತಿ ವೇಷಧಾರಿಗಳಿಂದ 1000 ಮಣ್ಣಿನ ಮೂರ್ತಿ ವಿತರಣೆ
ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಆತಂಕ
ಇದರ ನಡುವೆ ಮತ್ತೊಂದು ಆತಂಕವೂ ಶುರುವಾಗಿದೆ. ಕೊಡಗಿನಲ್ಲಿ ಸಾಮಾನ್ಯವಾಗಿ ಬೇಸಿಗೆ ಆರಂಭವಾದ ಬಳಿಕ ಕಂಡುಬರುವ ವಾತಾವರಣ ಈಗಲೇ ಕಂಡುಬರುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಜಲಾಶಯದ ನೀರನ್ನು ಕಾವೇರಿ ನದಿಗೆ ಹರಿಸುತ್ತಿರುವುದರಿಂದ, ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ವಿಶೇಷವಾಗಿ ಜನವರಿ, ಫೆಬ್ರವರಿ ವೇಳೆಗೆ ನೀರಿನ ಸಮಸ್ಯೆ ಎದುರಾದರೆ, ಕಷ್ಟದ ಸಂದರ್ಭದಲ್ಲಿ ಹಾರಂಗಿ ಜಲಾಶಯದ ನೀರನ್ನೇ ಕುಡಿಯುವ ನೀರಿನ ಮೂಲವಾಗಿ ಬಳಸಬೇಕಾಗುತ್ತದೆ. ಆದರೆ ಈಗಲೇ ಜಲಾಶಯದ ನೀರನ್ನು ಹೊರಗೆ ಹರಿಸುತ್ತಾ ಹೋದರೆ, ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಂಗ್ರಹ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುವುದು ಸಾರ್ವಜನಿಕರ ಆತಂಕ.
ಕೃಷಿಗೆ ನೀರು ಬೇಕು, ಕುಡಿಯಲು ನೀರು ಬೇಕು, ಭವಿಷ್ಯಕ್ಕೂ ನೀರು ಉಳಿಸಬೇಕು. ಹೀಗಾಗಿ ನೀರು ಬಿಡುಗಡೆ ಮಾಡುವ ಮುನ್ನ ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವ ವಿಚಾರ ಇದೀಗ ಕೊಡಗಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಜಲಾಶಯದ ನೀರಿನ ಮಟ್ಟ, ಒಳಹರಿವು ಹಾಗೂ ಮುಂದಿನ ಬೇಸಿಗೆಯ ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.
ಹಾರಂಗಿಯಿಂದ ನೀರು ಹರಿಯುತ್ತಿದೆ. ಆದರೆ ಈ ನೀರು ಎಷ್ಟು ದಿನ ಹರಿಯಲಿದೆ? ಮುಂದಿನ ಬೇಸಿಗೆಯಲ್ಲಿ ಕೊಡಗಿನ ಜನರ ದಾಹ ತೀರಿಸಲು ಜಲಾಶಯದಲ್ಲಿ ನೀರು ಉಳಿಯುತ್ತಾ? ಎಂಬ ಪ್ರಶ್ನೆಗಳು ಇದೀಗ ಎದುರಾಗಿವೆ. ಈ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರ ನೀಡಬೇಕಿದೆ.ಇದನ್ನೂ ಓದಿ: ಕಡವೆ ತಪ್ಪಿಸಲು ಹೋಗಿ ಕಾರು ಅಪಘಾತ – ಡಿಕ್ಕಿಯ ರಭಸಕ್ಕೆ ತುಂಡಾಗಿ ಬಿದ್ದ ವಿದ್ಯುತ್ ಕಂಬ

