ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೆಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ಯುವತಿಯೊಬ್ಬಳು ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಬಳಿ ನಡೆದಿದೆ.
ಕುಂಬಳಗೂಡು ಸಮೀಪದ ರಾಮೋಹಳ್ಳಿ ಗ್ರಾಮದ ನಿವಾಸಿ ಭೂಮಿಕಾ (22) ಮೃತ ಯುವತಿ. ಮೃತ ಭೂಮಿಕಾ ನಿನ್ನೆ ತಮ್ಮ ಸ್ನೇಹಿತರೊಂದಿಗೆ ಚನ್ನಪಟ್ಟಣಕ್ಕೆ ಆಗಮಿಸಿದ್ದರು. ತಡರಾತ್ರಿ ಸಂಕಲಗೆರೆ ಬಳಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ರಸ್ತೆ ದಾಟಲು ಯತ್ನಿಸುತ್ತಿದ್ದಾಗ, ಅತಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

