ಬಳ್ಳಾರಿ: ಪುಟ್‌ಪಾತ್ ಮೇಲೆ ಮಾತನಾಡುತ್ತಾ ನಿಂತಿದ್ದ ಜನರ ಮೇಲೆ ನಿಯಂತ್ರಣ ತಪ್ಪಿದ ಲಾರಿಯೊಂದು ಎರಗಿದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮಹಾದೇವಿ (48) ಮೃತ ದುರ್ದೈವಿ. ಘಟನೆಯಲ್ಲಿ ಸುನೀತಾ, ಪೂಜಾರಿ ಜೆಡೆಮ್ಮ ಮತ್ತು ಗಗನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಟ್ರಾಮಾಕೇರ್ ಕೇಂದ್ರಕ್ಕೆ ದಾಖಲಿಸಲಾಗಿದೆ.
ರಾತ್ರಿ ವೇಳೆ ಸೋಮಸಮುದ್ರ ಗ್ರಾಮದ ಬೇಕರಿಯೊಂದರ ಮುಂದಿನ ಪುಟ್‌ಪಾತ್ ಮೇಲೆ ನಾಲ್ವರು ನಿಂತು ಪರಸ್ಪರ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿಯು ಏಕಾಏಕಿ ನಿಯಂತ್ರಣ ತಪ್ಪಿ ಇವರ ಮೇಲೆ ನುಗ್ಗಿದೆ.
ಡಿಕ್ಕಿಯ ತೀವ್ರತೆಗೆ ಮಹಾದೇವಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದು, ಉಳಿದವರು ರಸ್ತೆಗೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡಿದ್ದಾರೆ. ಅಪಘಾತದ ಭಯಾನಕ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಇದನ್ನೂ ಓದಿ: 4*400 ರಿಲೇಯಲ್ಲಿ ಮಹಿಳೆಯರಿಗೆ ಚಿನ್ನ, ಪುರುಷರಿಗೆ ಕಂಚು

