Connect with us

Bengaluru City

ಡಾ.ರಾಜ್‍ಕುಮಾರ್ ಅಂದರೆ ಬಾಲುಗೆ ಜೀವಜ್ಜೀವ ಪ್ರೇಮ

Published

on

ಗಾಧವಾದ ಆ ಪ್ರತಿಭೆ, ಪರಭಾಷಾ ನಟರನ್ನು ಮೀರಿ ಬೆಳೆದ ವ್ಯಕ್ತಿತ್ವ. ಸ್ಟಾರ್ ಗಿರಿ ಜೊತೆಗೆ ಸಂಗೀತದ ಬಗ್ಗೆ ಅಷ್ಟೇನೂ ಗೊತ್ತಿರದಿದ್ದರೂ ಆ ಕ್ಷೇತ್ರದಲ್ಲಿ ಅವರು ಸಾಧಿಸಿದ ಸಾಹಸ. ಎಲ್ಲವೂ ಸೇರಿ ಅವರಿಬ್ಬರ ಬಾಂಧವ್ಯಕ್ಕೆ ವಜ್ರದ ಕಿರೀಟ ತೊಡಿಸಿತ್ತು. ಆದರೆ ದುರಂತ ಅಂದರೆ ಬಾಲು ಅವರಿಗೆ ಉಳಿದಿದ್ದ ಆಸೆ ಏನೆಂದರೆ ರಾಜ್ ಅಭಿನಯಕ್ಕೆ ಧ್ವನಿಯಾಗಬೇಕು. ಅವರ ಕೆಲವು ಸಿನಿಮಾಗಳಿಗೆ ಕಂಠ ನೀಡಬೇಕು ಎನ್ನುವುದು ಆಗಿತ್ತು. ಸಿಐಡಿ ರಾಜಣ್ಣ ಒಂದೇ ಒಂದು ಅವಕಾಶ ಬಿಟ್ಟರೆ ಇನ್ನೊಂದು ಬಾಲುಗೆ ದಕ್ಕಲಿಲ್ಲ.

ಎಸ್‍ಪಿಬಿ ಅವರನ್ನು ಕಂಡರೆ ರಾಜ್‍ಕುಮಾರ್ ಅವರಿಗೆ ಹೆಚ್ಚು ಪ್ರೀತಿ. ಅವರ ಕನ್ನಡ, ತೆಲುಗು, ತಮಿಳು ಹಾಡುಗಳನ್ನು ಕೇಳಿ ಶಬ್ಬಾಶ್ ಎಂದಿದ್ದರು. ಅದೇ ರೀತಿ ಬಾಲು ಕೂಡ ರಾಜ್ ಗಾಯನ ಪ್ರತಿಭೆಗೆ ಶರಣು ಶರಣೆಂದಿದ್ದರು.

ರಂಗಭೂಮಿ ಕಲಾವಿದ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ ಸಂಗೀತ ಮತ್ತು ಭಾಷೆ ಮೇಲಿದ್ದ ರಾಜ್‍ಕುಮಾರ್ ಅವರ ಹಿಡಿತಕ್ಕೆ ಎಸ್‍ಪಿಬಿ ದಂಗಾಗಿದ್ದರು. ರಾಜ್‍ಕುಮಾರ್ ಅವರು ಹೆಚ್ಚು ಕಮ್ಮಿ ನೂರೈವತ್ತು ಸಿನಿಮಾಗಳನ್ನು ಪೂರೈಸಿದ ನಂತರ ಎಸ್‍ಪಿ ಕನ್ನಡ ಚಿತ್ರರಂಗದ ಗಾಯನ ಲೋಕಕ್ಕೆ ಕಾಲಿಟ್ಟಿದ್ದರು. ಅದಾಗಲೇ ರಾಜ್‍ಕುಮಾರ್ ಅವರಿಗೆ ಪಿಬಿ ಶ್ರೀನಿವಾಸ್ ಖಾಯಂ ಶಾರೀರ ನೀಡುತ್ತಿದ್ದರು. ಅಂದರೆ ಹಾಡಿಗೆ ಧ್ವನಿಯಾಗುತ್ತಿದ್ದರು.

ಪಿಬಿ ಶ್ರೀನಿವಾಸ್ ಕಂಠ ಅದೆಷ್ಟು ರಾಜ್‍ಗೆ ಹೊಂದಿಕೆಯಾಗುತ್ತಿತ್ತು ಅಂದರೆ, ಅದನ್ನು ಖುದ್ದು ರಾಜ್‍ಕುಮಾರೇ ಹಾಡಿದ್ದಾರೆ ಎಂದು ಜನರು ನಂಬುವಂತಿತ್ತು. ಹೀಗಾಗಿ ಅವರಿಬ್ಬರ ಕಾಂಬಿನೇಶನ್‍ನಲ್ಲಿ ನೂರಾರು ಗೀತೆಗಳು ಹೊರ ಬಂದವು. ರಾಜನ್ ನಾಗೇಂದ್ರ, ಜಿಕೆ ವೆಂಕಟೇಶ್, ಎಂ ರಂಗರಾವ್ ಸೇರಿದಂತೆ ಹಲವಾರು ಸಂಗೀತ ನಿರ್ದೇಶಕರು ರಾಜ್‍ಕುಮಾರ್ ಮತ್ತು ಪಿಬಿಎಸ್ ಜೋಡಿಯನ್ನು ಅಮರ ಜೋಡಿಗಳನ್ನಾಗಿಸಲು ಸಹಕರಿಸಿದರು. ಕಸ್ತೂರಿ ನಿವಾಸ, ಬಂಗಾರದ ಮನುಷ್ಯ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಈ ಜೋಡಿ ಕೊಟ್ಟವು.

ನಾಗರಹಾವು ಸಿನಿಮಾದಿಂದ ಎಸ್‍ಪಿಬಿ ಕನ್ನಡ ಚಿತ್ರರಂಗಕ್ಕೆ ಬಂದರು. ದೇವರ ಗುಡಿ ಸಿನಿಮಾದಿಂದ ಸ್ಟಾರ್ ಆದರು. ಈ ನಡುವೆ ಅವರಿಗೆ ಡಾ.ರಾಜ್‍ಕುಮಾರ್ ಅವರಿಗೆ ನಟಿಸಿದ ಎಮ್ಮೆ ತಮ್ಮಣ್ಣ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿತು. ಚಿ.ಉದಯಶಂಕರ್ ಬರೆದ ಗೀತೆಗೆ ಸತ್ಯಂ ಸಂಗೀತ ನೀಡಿದ್ದರು. ಆ ಸಿನಿಮಾ ಹಿಟ್ ಆಯಿತು.

ಬಾಲು ಅವರಿಗೆ ರಾಜ್‍ಕುಮಾರ್ ಅವರ ಸಿನಿಮಾಕ್ಕೆ ಒಂದಾದರೂ ಹಾಡನ್ನು ಹಾಡಿದೆ ಎನ್ನುವ ಹೆಮ್ಮೆ ಮತ್ತು ನೆಮ್ಮದಿ ದಕ್ಕಿತು. ಆದರೆ ಅದಾಗಲೇ ಅದಾಗಲೇ ಪಿಬಿ ಶ್ರೀನಿವಾಸ್ ಕಂಠದೊಂದಿಗೆ ರಾಜ್‍ಕುಮಾರ್ ಅವರು ಹೊಂದಿಕೊಂಡಿದ್ದರು. ಜನರೂ ರಾಜ್‍ಕುಮಾರ್ ಅವರ ಸಿನಿಮಾ ಇದ್ದ ಮೇಲೆ ಅಲ್ಲಿ ಪಿಬಿಎಸ್ ಧ್ವನಿ ಇರಲೇಬೇಕೆಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಬಹುಶಃ ಮುಂದಿನ ಹಲವಾರು ವರ್ಷ ರಾಜ್ – ಬಾಲು ಜೋಡಿ ಮತ್ತೆ ಒಂದಾಗಲಿಲ್ಲ. ಅಂದರೆ ರಾಜ್‍ಕುಮಾರ್ ಅವರ ಕಂಠಕ್ಕೆ ಧ್ವನಿ ನೀಡುವ ಅವಕಾಶ ಬಾಲು ಅವರಿಗೆ ದಕ್ಕಲಿಲ್ಲ.

ಇದಾದ ಎಷ್ಟೋ ವರ್ಷಗಳ ನಂತರ ಮತ್ತೆ ರಾಜ್‍ಕುಮಾರ್ ಹಾಗೂ ಬಾಲು ಜೊತೆಯಾಗುವ ಕಾಲ ಬಂದಿತ್ತು. ಆ ಸಿನಿಮಾ ಹೆಸರು ರಾಜ ನನ್ನ ರಾಜ. ಶೇಷಗಿರಿರಾವ್ ನಿರ್ದೇಶನದ ಈ ಚಿತ್ರದಲ್ಲಿ ಒಂದು ಹಾಡಿದೆ. ‘ನೂರು ಕಣ್ಣು ಸಾಲದು ನಿನ್ನ ನೋಡಲು…’ ಇದೇ ಹಾಡನ್ನು ಇಬ್ಬರು ಗಾಯಕರು ಹಾಡಬೇಕಿತ್ತು. ಅದಾಗಲೇ ರಾಜ್ ಗಾಯಕರಾಗಿ ಹೆಸರು ಮಾಡಿದ್ದರು. ಆದರೂ ಅದೊಂದು ಗೀತೆಗೆ ಇಬ್ಬರು ಗಾಯಕರ ಅಗತ್ಯ ಇದ್ದರೂ ರಾಜ್‍ಕುಮಾರ್ ಅವರು ಹಾಡಲಿಲ್ಲ. ಎಸ್‍ಪಿಬಿ ಮತ್ತು ಪಿಬಿಎಸ್ ಇಬ್ಬರಿಂದ ಅದೊಂದು ಹಾಡನ್ನು ಹಾಡಿಸಿದರು. ರಾಜ್ ಸಿನಿಮಾಕ್ಕೆ ಹಾಡಿದ ಖುಷಿ ಬಾಲುಗೆ ದಕ್ಕಿದರೂ ರಾಜ್ ಕಂಠಕ್ಕೆ ಹಾಡಾಗುವ ಅವಕಾಶ ಸಿಗಲಿಲ್ಲ ಎನ್ನುವ ಸಣ್ಣ ಬೇಸರ ಸಹಜವಾಗಿ ಅವರಿಗೆ ಬಂದಿತ್ತು.

ಮತ್ತೊಮ್ಮೆ ರಾಜ್ ಹಾಗೂ ಬಾಲು ಒಂದಾಗುವ ಗಳಿಗೆ ಬಂದಿತ್ತು. ಆ ಸಿನಿಮಾ ಹೆಸರು ಮುದ್ದಿನ ಮಾವ. ಶಶಿಕುಮಾರ್ ಅದಕ್ಕೆ ಹೀರೋ. ಮಜಾ ಅಂದರೆ ಬಾಲು ಅವರು ಕೂಡ ಇದರಲ್ಲಿ ಮುಖ್ಯ ಪಾತ್ರ ಮಾಡಿದ್ದರು. ಅವರ ಪಾತ್ರಕ್ಕೆ ಅವರೇ ಧ್ವನಿ ನೀಡಿದರು. ಅದರಲ್ಲಿ ಒಂದು ಹಾಡಿತ್ತು. ಮಾವ ಬಾಲು ಹಾಗೂ ಅಳಿಯ ಶಶಿಕುಮಾರ್ ಹಾಡಬೇಕಿತ್ತು. ಶಶಿಕುಮಾರ್ ಹಾಡಿಗೆ ಬಾಲು ಕಂಠ ಕೊಡುವುದು ನಿಕ್ಕಿಯಾಯಿತು. ಆದರೆ ಖುದ್ದು ಬಾಲು ಕಂಠಕ್ಕೆ ಅವರೇ ಹಾಡಿದರೆ ಚೆನ್ನಾಗಿರಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಕೊನೆಗೆ ಶಶಿಕುಮಾರ್ ಮನವೊಲಿಕೆಯಿಂದ ಎಸ್‍ಪಿಬಿ ಹಾಡಿಗೆ ದಿ ಗ್ರೇಟ್ ಅಣ್ಣಾವ್ರೇ ಕಂಠ ನೀಡಿದ್ದರು.

ಈ ವೇಳೆ ಬಾಲು ಅವರ ಸಂತೋಷ ನೂರು ಪಟ್ಟು ಹೆಚ್ಚಾಗಿತ್ತು. ಅಂಥ ದೊಡ್ಡ ಕಲಾವಿದ, ಅಂಥ ದೊಡ್ಡ ಗಾಯಕ. ಅವರು ನನ್ನ ಹಾಡಿಗೆ ಧ್ವನಿ ನೀಡುತ್ತಾರೆಂದರೆ ಸಣ್ಣ ಮಾತಾ? ಇದು ನನ್ನ ಪೂರ್ವಜನ್ಮದ ಪುಣ್ಯ. ನಿಜಕ್ಕೂ ನಾನು ಧನ್ಯ. ಇಷ್ಟು ವರ್ಷ ಅವರ ಚಿತ್ರಗಳಿಗೆ ಹೆಚ್ಚು ಹಾಡು ಹಾಡಲಿಲ್ಲ ಎನ್ನುವ ಬೇಸರ ಇತ್ತು. ಆದರೆ ಇದೊಂದು ಸಿನಿಮಾದಿಂದ ಅದೆಲ್ಲ ಕೊಚ್ಚಿ ಹೋಯಿತು. ಇದನ್ನು ನಾನು ಇನ್ನೊಂದು ಜನ್ಮ ಎತ್ತಿ ಬಂದರೂ ಮರೆಯಲು ಸಾಧ್ಯವೇ ಇಲ್ಲ ಎಂದು ಎಷ್ಟೋ ವೇದಿಕೆಗಳಲ್ಲಿ ಭಾವುಕರಾಗಿ ಹೇಳಿದ್ದರು.

Click to comment

Leave a Reply

Your email address will not be published. Required fields are marked *