Connect with us

Chamarajanagar

ಆನೆ ಕಾರಿಡಾರ್‌ನಲ್ಲಿ ಸೋಲಾರ್ ಪ್ಲಾಂಟ್- ಸ್ಥಳಾಂತರಕ್ಕೆ ವನ್ಯಪ್ರಿಯರ ಒತ್ತಾಯ

Published

on

ಚಾಮರಾಜನಗರ: ಜಿಲ್ಲೆಯ ಬಿ.ಆರ್.ಟಿ.ಹುಲಿ ರಕ್ಷಿತಾರಣ್ಯದ ಸೂಕ್ಷ್ಮ ಪರಿಸರವಲಯದಲ್ಲೇ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ತಲೆ ಎತ್ತಿದ್ದು ವನ್ಯಜೀವಿಗಳಿಗೆ ಕಂಟಕಪ್ರಾಯವಾಗಿದೆ.

ಬಿಳಿಗಿರಿ ರಂಗನಬೆಟ್ಟದ ಗುಂಡಾಲ್ ಜಲಾಯಶಯದ ಬಳಿ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲೇ 500 ಎಕರೆ ಪ್ರದೇಶದಲ್ಲಿ ಬೃಹತ್ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭವಾಗಿದೆ. ಖಾಸಗಿ ಕಂಪನಿಯೊಂದು ರೈತರ ಜಮೀನುಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಇಲ್ಲಿ ಸೋಲಾರ್ ಘಟಕ ಆರಂಭಿಸಿದೆ.

ಈ ಪ್ರದೇಶ ಬಿಳಿಗಿರಿರಂಗನಬೆಟ್ಟದಿಂದ ಮಲೆಮಹದೇಶ್ವರಬೆಟ್ಟಕ್ಕೆ ಆನೆಗಳು ಸೇರಿದಂತೆ ವನ್ಯಜೀವಿಗಳು ಮುಕ್ತವಾಗಿ ಸಂಚರಿಸುವ ಮೊಗಸಾಲೆಯಾಗಿದೆ. ಆದರೆ ಇಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣವಾಗಿರುವುದರಿಂದ ಎರಡು ಅರಣ್ಯಗಳ ನಡುವೆ ಆನೆ ಸೇರಿದಂತೆ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಕಡಿವಾಣ ಬಿದ್ದಿದೆ. ಈ ಹಿಂದೆ ಇದೇ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವನ್ಯಜೀವಿಗಳ ಹಿತದೃಷ್ಟಿಯಿಂದ ಅದನ್ನು ಕೈಬಿಡಲಾಗಿತ್ತು. ಆದರೆ ಇದೀಗ ಅದೇ ಪ್ರದೇಶದಲ್ಲಿ ಸೋಲಾರ್ ಉತ್ಪಾದನಾ ಘಟಕ ತಲೆ ಎತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

ಸೂಕ್ಷ್ಮ ಪರಿಸರ ವಲಯದಲ್ಲಿ ಆರಂಭವಾಗಿರುವ ಈ ಘಟಕಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡಿರುವುದಕ್ಕೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಪರಿಸರ ವಲಯ ಘೋಷಣೆಗೆ ಮೊದಲೇ ಇಲ್ಲಿ ಸೋಲಾರ್ ಘಟಕ ಸ್ಥಾಪನೆಗೆ ಅನುಮತಿ ನೀಡಲಾಗಿತ್ತು. ಆದರೆ ಸೂಕ್ಷ್ಮ ಪರಿಸರ ವಲಯ ಘೋಷಣೆ ನಂತರ ಯಾವುದೇ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡುತ್ತಿಲ್ಲ ಎಂಬುದು ಅರಣ್ಯ ಇಲಾಖೆ ಸಮರ್ಥಿಸಿಕೊಳ್ಳುತ್ತಿದೆ.

ಎರಡು ಅರಣ್ಯಗಳ ನಡುವೆ ಪ್ರಾಣಿಗಳು ಸಂಚರಿಸುವ ಕಾರಿಡಾರ್ ಗೆ ಕುತ್ತು ಬಂದಿದೆ. ಭವಿಷ್ಯದಲ್ಲಿ ಜೀವವೈವಿಧ್ಯತೆಗೂ ಧಕ್ಕೆ ಉಂಟಾಗಲಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಾಣಿಗಳು ಸಂಚರಿಸುವ ದಾರಿ ಬಂದ್ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ ಎಂದು ವನ್ಯಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *