ಪ್ರತಿಯೊಂದು ಧರ್ಮದಲ್ಲೂ ಅವರದ್ದೇ ಆದ ಅಂತ್ಯ ಸಂಸ್ಕಾರದ ವಿಧಿ – ವಿಧಾನಗಳನ್ನ ಪಾಲಿಸುವ ಪದ್ದತಿ ಇದೆ. ಹಾಗಾಗಿ, ಪ್ರತಿಯೊಂದು ಧರ್ಮದಲ್ಲಿನ ಅಂತ್ಯ ಸಂಸ್ಕಾರದ ವಿಧಿ – ವಿಧಾನಗಳು ಒಂದಕ್ಕೊಂದು ಭಿನ್ನವಾಗಿದೆ. ಪ್ರತಿಯೊಂದು ಧರ್ಮದಲ್ಲೂ ಅಂತ್ಯಸಂಸ್ಕಾರದ ನಂತರ ಏನು ಉಳಿದಿದೆ ಎಂಬುದನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಭಾರತೀಯ ಸಂಪ್ರದಾಯ ಮತ್ತು ವಿಜ್ಞಾನ ಎರಡೂ ಈ ವಿಷಯದ ಬಗ್ಗೆ ತಮ್ಮದೇ ಆದ ಸಾಕಷ್ಟು ಸಂಶೋಧನೆಗಳನ್ನು ಮಾಡಿದೆ.
ಕೆಲವು ಸ್ಥಳಗಳಲ್ಲಿ ಅಂತ್ಯಕ್ರಿಯೆಗೆ ದೇಹವನ್ನ ದಹನ ಮಾಡಿದ್ರೆ, ಇನ್ನೂ ಕೆಲವು ಸ್ಥಳಗಳಲ್ಲಿ ಹೂಳಲಾಗುತ್ತದೆ. ಕೆಲವು ಕಡೆ ಸಮುದ್ರಕ್ಕೆ ಎಸೆಯಲಾಗುತ್ತದೆ. ಆದ್ರೆ ಈ ಪ್ರದೇಶದಲ್ಲಿ ಮಾತ್ರ ಅಂತ್ಯಸಂಸ್ಕಾರ ನಡೆಸುವ ವಿಧಾನವೇ ವಿಚಿತ್ರ. ವ್ಯಕ್ತಿಯ ಮರಣದ ನಂತರ ಮೃತದೇಹವನ್ನ ಪರ್ವತದ ತುತ್ತತುದಿಗೆ ಕೊಂಡೊಯ್ದು, ತುಂಡುತುಂಡಾಗಿ ಕತ್ತರಿಸಿ ರಣಹದ್ದುಗಳಿಗೆ ಬಿಸಾಡಲಾಗುತ್ತದೆ.
ಹೊರಗಿನವರಿಗೆ ಇದು ಅತ್ಯಂತ ಭಯಾನಕವೆನಿಸಿದ್ರೂ ಅಲ್ಲಿಯ ಜನರು ಇದನ್ನು ಪವಿತ್ರ ಎಂದೇ ಭಾವಿಸುತ್ತಾರೆ. ಅಷ್ಟಕ್ಕೂ ಇದು ಯಾವ ಪ್ರದೇಶ? ಅಂತ್ಯಕ್ರಿಯೆ ಪದ್ದತಿ ಏಕೆ ವಿಚಿತ್ರ ಅನ್ನೋದನ್ನ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ಈ ಸಂಪ್ರದಾಯ ಎಲ್ಲಿದೆ?
ಅಷ್ಟಕ್ಕೂ ಈ ರೀತಿಯ ಅಂತ್ಯಕ್ರಿಯೆ ನಡೆಯುವುದು ಭಾರತದ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನಲ್ಲಿ. ಇದನ್ನ ‘ಸ್ಕೈ ಫರ್ಯನಲ್’ ಅಥವಾ ‘ಸೆಲೆಸ್ಟಿಯಲ್ ಫ್ಯೂನರಲ್’ ಎಂದು ಕರೆಯಲಾಗುತ್ತದೆ. ಟಿಬೆಟಿಯನ್ ಬೌದ್ಧ ಧರ್ಮದಲ್ಲಿ ಶತಮಾನಗಳಷ್ಟು ಹಳೆಯದ್ದಾದ ಸಂಪ್ರದಾಯ ಇದಾಗಿದೆ. ಇಲ್ಲಿನ ಅನೇಕ ಪ್ರದೇಶಗಳಲ್ಲಿ ಈ ಪದ್ಧತಿ ಅನುಸರಿಸಲಾಗುತ್ತದೆ.
ಟಿಬೆಟ್‌ನ ಜನರು ಸಾವಿನ ನಂತರ ದೇಹವು ಜಡವಾಗುತ್ತದೆ, ಮೂರುಕಾಸಿನ ಪ್ರಯೋಜನವಿಲ್ಲ ಎಂದು ನಂಬುತ್ತಾರೆ. ಆತ್ಮವು ದೇಹವನ್ನ ಬಿಟ್ಟುಹೋದಾಗ, ಆ ದೇಹವನ್ನ ಪ್ರಕೃತಿಗೆ ಮರಳಿ ತಿರುಗಿಸುವುದು ದಾನದ ಶ್ರೇಷ್ಠ ಸ್ವರೂಪವೆಂದೂ ನಂಬುತ್ತಾರೆ.
ಸಾವಿನ ಬಳಿಕ ಮುಂದೇನು?
ಇಲ್ಲಿನ ಯಾವುದೇ ವ್ಯಕ್ತಿ ಮೃತಪಟ್ಟಬಳಿಕ, ಅವರ ದೇಹವನ್ನ ಶ್ವೇತವಸ್ತ್ರದಿಂದ ಸುತ್ತಿ, ಮನೆಯ ಒಂದು ಮೂಲೆಯಲ್ಲಿ ಇಡಲಾಗುತ್ತದೆ. ಶವವು 3 ರಿಂದ 5 ದಿನಗಳ ಕಾಲ ಅಲ್ಲಿಯೇ ಇರುತ್ತದೆ. ಈ ಸಮಯದಲ್ಲಿ ಬೌದ್ಧ ಸನ್ಯಾಸಿಗಳು, ಲಾಮಾಗಳು, ಧಾರ್ಮಿಕ ಮಂತ್ರಗಳನ್ನ ಪಠಿಸುತ್ತಾರೆ. ಇದರಿಂದ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಸ್ವರ್ಗಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ನಂಬಿಕೆ.
3-5 ದಿನಗಳು ಕಳೆದ ಬಳಿಕ ಬಟ್ಟೆಯಲ್ಲಿ ಸುತ್ತಿದ ದೇಹವನ್ನ ಆಕಾಶ ಸಮಾಧಿ ಸ್ಥಳಕ್ಕೆ (ಪರ್ವತದ ತುದಿಗೆ) ಕೊಂಡೊಯ್ಯಲಾಗುತ್ತದೆ. ಅಂತ್ಯಕ್ರಿಯೆ ಶುರು ಮಾಡುವುದಕ್ಕೆ ಮುನ್ನ ಭ್ರೂಣಸ್ಥಾನದಲ್ಲಿದ್ದಂತೆ ಸುರುಳಿಯಾಕಾರದಲ್ಲಿ ಇರಸಲಾಗುತ್ತದೆ. ಬಳಿಕ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನ ನೆರವೇರಿಸಲಾಗುತ್ತದೆ. ತರಬೇತಿ ಪಡೆದ ಸಿಬ್ಬಂದಿಯಷ್ಟೇ ಈ ಆಚರಣೆಯನ್ನು ಮಾಡುತ್ತಾರೆ.
ಕೊನೇ ಹಂತದ ಅಂತ್ಯಕ್ರಿಯೆ ಹೇಗಿರುತ್ತೆ?
ಪರ್ವತದ ತುತ್ತ ತುದಿಗೆ ದೇಹವನ್ನು ಕೊಂಡೊಯ್ದ ಬಳಿಕ ಒಂದಷ್ಟು ಮಂತ್ರ ಪಠಣೆ ನಡೆಯುತ್ತದೆ. ನಂತರ ವಿಶೇಷ ಆಚರಣೆ ಮಾಡುವವರು ಮೃತದೇಹವನ್ನ ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ, ಅದೆಲ್ಲವನ್ನು ರಣಹದ್ದುಗಳಿಗೆ ಬಿಸಾಡುತ್ತಾರೆ. ದೇಹದ ಮಾಂಸ ಖಾಲಿಯಾದ ಬಳಿಕ ಉಳಿದ ಮೂಳೆಗಳನ್ನ ಪುಡಿ ಮಾಡಿ ಬಾರ್ಲಿಹಿಟ್ಟಿನೊಂದಿಗೆ ಬೆರಸಿ ಅದನ್ನೂ ರಣಹದ್ದುಗಳಿಗೆ ಇಡಲಾಗುತ್ತದೆ.
ರಣಹದ್ದುಗಳಿಗೆ ಏಕೆ ಪ್ರಾಮುಖ್ಯತೆ?
ಟಿಬೆಟಿಯನ್ ಬೌದ್ಧ ಧರ್ಮದಲ್ಲಿ ರಣಹದ್ದುಗಳನ್ನ ಪವಿತ್ರ ಪಕ್ಷಿಗಳೆಂದು ಪರಿಗಣಿಸಲಾಗುತ್ತದೆ. ರಣಹದ್ದುಗಳು ಸಂಪೂರ್ಣವಾಗಿ ಶವವನ್ನು ತಿಂದರೆ ಸತ್ತವರು ಒಳ್ಳೆ ರೀತಿಯ ಜೀವನ ನಡೆಸಿದ್ದರು ಎಂದು ನಂಬುತ್ತಾರೆ. ಅಲ್ಲದೇ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಭಾವಿಸುತ್ತಾರೆ. ರಣಹದ್ದುಗಳನ್ನು ಭೂಮಿ ಮತ್ತು ಸ್ವರ್ಗದ ನಡುವಿನ ವಾಹಕಗಳೆಂದು ನಂಬುವುದರಿಂದ ಆತ್ಮವು ಸ್ವರ್ಗ ಸೇರಲು ಅವು ದಾರಿ ಮಾಡಿಕೊಡುತ್ತವೆ ಅನ್ನೋದು ಅವರ ಬಲವಾದ ನಂಬಿಕೆ.
ವಿಶ್ವದ ಅನೇಕ ಭಾಗಗಳಲ್ಲಿ ಅಂತ್ಯಕ್ರಿಯೆ ಸ್ವರೂಪಗಳು ಬದಲಾಗಿದ್ದರೂ, ಟಿಬೆಟಿಯನ್ ಆಕಾಶ ಸಮಾಧಿಯನ್ನು ಅತ್ಯಂತ ವಿಶಿಷ್ಟ ಮತ್ತು ನಿಗೂಢ ಸಂಪ್ರದಾಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಸಾವಿನ ನಂತರ ದೇಹವನ್ನು ಭೂಮಿಗೆ ಅಥವಾ ಬೆಂಕಿಗೆ ಒಪ್ಪಿಸಿದರೆ, ಟಿಬೆಟ್‌ನಲ್ಲಿ, ಇದು ಆಕಾಶದ ಜೀವಿಗಳಿಗೆ, ಅಂದರೆ ರಣಹದ್ದುಗಳಿಗೆ ಸಮರ್ಪಿತವಾಗಿದೆ. ಅಲ್ಲಿನ ಜನರಿಗೆ, ಇದು ಕೇವಲ ಅಂತ್ಯಕ್ರಿಯೆಯಲ್ಲ, ಜೀವನ, ಸಾವು ಮತ್ತು ಪುನರ್ಜನ್ಮದ ಚಕ್ರದ ಆಧ್ಯಾತ್ಮಿಕ ಮಾರ್ಗವಾಗಿದೆ ಅನ್ನೋದು ನಂಬಿಕೆ.
