ಬಳ್ಳಾರಿ: ಸಿರಗುಪ್ಪ ಪಟ್ಟಣದಲ್ಲಿ ಕಾಮಗಾರಿಯೊಂದರ ಭೂಮಿ ಪೂಜೆ(Bhoomi Pooja) ನೆರವೇರಿಸುವ ವಿಚಾರವಾಗಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಗೊಂದಲದ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಭೂಮಿ ಪೂಜೆ ಕಾರ್ಯಕ್ರಮ ರದ್ದಾಗಿದೆ.

ಹಾಲಿ ಕಾಂಗ್ರೆಸ್ ಶಾಸಕ ಬಿ.ಎಂ. ನಾಗರಾಜ್ (BM Nagaraj) ಹಾಗೂ ಬಿಜೆಪಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ(MS Somalingappa) ನಡುವೆ ಸ್ಥಳದಲ್ಲೇ ನೇರ ವಾಗ್ವಾದ ನಡೆದಿದೆ.
ಸಿರಗುಪ್ಪ ಪಟ್ಟಣದ ನಿಟ್ಟೂರು ರಸ್ತೆಯ 2ನೇ ವಾರ್ಡ್ ವ್ಯಾಪ್ತಿಯಲ್ಲಿ ಬಾಲಕಿಯರ ವಸತಿ ನಿಲಯ ಹಾಗೂ ಸ್ಥಳೀಯ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಹಾಲಿ ಶಾಸಕರು ಸಿದ್ಧತೆ ನಡೆಸಿದ್ದರು. ಇದನ್ನೂ ಓದಿ: ನಾನು ರಾತ್ರೋರಾತ್ರಿ ಸ್ಟಾರ್ ಆದವ್ನಲ್ಲ – ಕಷ್ಟದ ದಿನಗಳ ನೆನೆದ ಯಶ್
ಉದ್ದೇಶಿತ ಕಾಮಗಾರಿ ನಡೆಯುವ ಜಾಗದಲ್ಲಿ ಹತ್ತಾರು ಬಡ ಕುಟುಂಬಗಳು ಹಲವು ವರ್ಷಗಳಿಂದ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿವೆ. ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಗುಡಿಸಲುಗಳನ್ನು ತೆರವುಗೊಳಿಸಿ, ಜನರನ್ನು ವಕ್ಕಲೆಬ್ಬಿಸುವುದಕ್ಕೆ ಮಾಜಿ ಶಾಸಕ ಸೋಮಲಿಂಗಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇಬ್ಬರು ನಾಯಕರ ನಡುವೆ ವಾದ-ಪ್ರತಿವಾದಗಳು ತಾರಕಕ್ಕೇರಿದ ಕಾರಣ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ವಿರೋಧ ಹಾಗೂ ಗೊಂದಲ ಹೆಚ್ಚಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಭೂಮಿ ಪೂಜೆ ಕಾರ್ಯಕ್ರಮವನ್ನು ರದ್ದುಗೊಳಿಸಿ, ಶಾಸಕ ಬಿ.ಎಂ. ನಾಗರಾಜ್ ಸ್ಥಳದಿಂದ ನಿರ್ಗಮಿಸಿದರು.
