ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರದ ಮೂಲಕ ದೇಶ ವಿದೇಶದಲ್ಲಿ ಭಾರೀ ಹೆಸರು ಮಾಡಿರುವ ನಟ ರಾಕಿಂಗ್ ಸ್ಟಾರ್ ಯಶ್ ಹೆಸರಾಂತ `ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ತಮ್ಮ ಸಿನಿಮಾ ಜರ್ನಿಯನ್ನ ಮೆಲುಕು ಹಾಕಿದ್ದಾರೆ. ನಾನು ರಾತ್ರೋರಾತ್ರಿ ಸ್ಟಾರ್ ಆದವ್ನಲ್ಲ, ಕಷ್ಟಪಟ್ಟು ಸ್ಟಾರ್ ಆಗಿದ್ದೇನೆ ಎಂದು ಯಶ್ ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ.

ಕೆಜಿಎಫ್ ಸಿನಿಮಾ ಮೂಲಕ ದೇಶದಲ್ಲಿ ಗುರುತಿಸಿಕೊಂಡ ಯಶ್ ಅಲ್ಲಿಯವರೆಗೂ ಬೇರೆ ರಾಜ್ಯದವರಿಗೆ ಪರಿಚಯ ಇರಲಿಲ್ಲ. ಆದರೆ ಕನ್ನಡಿಗರು ಯಶ್ ಒಂದೊಂದು ಹೆಜ್ಜೆಗೂ ಸಾಕ್ಷಿಯಾದವರು. ಆದರೆ `ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಯಶ್‌ಗೆ ಬಹಳ ಟ್ರಿಕ್ಕಿ ಪ್ರಶ್ನೆ ಎದುರಾಯ್ತು. `ರಾತ್ರೋರಾತ್ರಿ ಸ್ಟಾರ್ ಆಗಿದ್ದಕ್ಕೆ ಫ್ರೆಂಡ್ಸ್ ಫ್ಯಾಮಿಲಿ ರಿಯಾಕ್ಷನ್ ಹೇಗಿತ್ತು?’ ಎಂಬ ಪ್ರೇಕ್ಷಕರ ಪ್ರಶ್ನೆಗೆ ಯಶ್ ಸುದೀರ್ಘವಾಗಿ, ಸ್ವವಿವರವಾಗಿ ಉತ್ತರ ಕೊಟ್ಟಿದ್ದಾರೆ.
ಸೀರಿಯಲ್‌ನಿಂದ ಬಣ್ಣದ ಪ್ರಯಾಣ ಪ್ರಾರಂಭಿಸಿದ್ದ ಯಶ್ ಬಳಿಕ ಪೋಷಕ ಪಾತ್ರಗಳಲ್ಲಿ ಕಾಣಿಸ್ಕೊಂಡು ಬಳಿಕ ಹೀರೋ ಆದವರು. ಮಾಸ್ ಹೀರೋ ಆಗಿ ಬದಲಾಯಿಸಲು ರಾಜಾಹುಲಿ ಚಿತ್ರ ಬರಬೇಕಾಯ್ತು. ಬಳಿಕ ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಕೊಡ್ತು. ಇದೆಲ್ಲಾ ಆದ್ಮೇಲೆ ಬಂದಿದ್ದೇ ಕೆಜಿಎಫ್. ಆರಂಭದಲ್ಲಿ ಕೆಜಿಎಫ್ ಚಿಕ್ಕ ಚಿತ್ರವಾಗಿತ್ತು. ಆದರೆ ಯಶ್ ತಾವು ಕಂಡ ಕನಸನ್ನು ಈ ಮೂಲಕ ನನಸು ಮಾಡಿಕೊಂಡ್ರು. ಆ ಹೆಜ್ಜೆಯನ್ನು ಯಶ್ ಇದೀಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಾರ್ಯಕ್ರಮದ ಆಡಿಯನ್ಸ್ ಗ್ಯಾಲರಿಯಿಂದ ನಂದಿನಿ ಹೆಸರಿನ ಪ್ರೇಕ್ಷಕಿಯಿಂದ ತೂರಿಬಂದ ಪ್ರಶ್ನೆಯಲ್ಲಿ ನೀವು ರಾತ್ರೋರಾತ್ರಿ ಸೂಪರ್ ಸ್ಟಾರ್ ಆದಾಗ ನಿಮ್ಮ ಕಾಲೇಜ್ ಫ್ರೆಂಡ್ಸ್,ಫ್ಯಾಮಿಲಿ, ಫ್ರೆಂಡ್ಸ್ ಇವರೆಲ್ಲರ ರಿಯಾಕ್ಷನ್ ಏನಿತ್ತು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಯಶ್ ಖಡಕ್ಕಾಗಿ ಬಾಲಿವುಡ್‌ಗೆ ಮನವರಿಕೆ ಆಗುವಂತೆ ಉತ್ತರ ಕೊಟ್ಟಿದ್ದಾರೆ.
ಯಶ್ ಉತ್ತರ ಏನು?
ನನಗೆ ರಾತ್ರೋರಾತ್ರಿ ಸಕ್ಸಸ್ ಸಿಕ್ತು ಅಂತ ಇಲ್ಲಿ ಜನ ಅಂದುಕೊಳ್ತಾರೆ. ನನ್ನ ಜೀವನದಲ್ಲಿ ಇದು ವಿಭಿನ್ನವಾಗಿದೆ. ಆದರೆ ಕರ್ನಾಟದಲ್ಲಿ ನಾನು ರಾತ್ರೋರಾತ್ರಿ ಸ್ಟಾರ್ ಆದವನಲ್ಲ. ತುಂಬಾ ಕಷ್ಟ ಪಟ್ಟಿದ್ದೇನೆ. ದೇಶದ ಜನರು ನನ್ನನ್ನು ಕೆಜಿಎಫ್‌ನಿಂದ ಗುರುತಿಸುತ್ತಾರೆ. ಆದರೆ ಕೆಜಿಎಫ್ ಚಿತ್ರಕ್ಕೂ ಮುನ್ನ ತುಂಬಾ ಸಿನಿಮಾಗಳನ್ನು ಹಿಟ್ ಕೊಡಬೇಕಾಯಿತು. ಆ ಸಿನಿಮಾಗಳೆಲ್ಲ ಸಕ್ಸಸ್ ಆಗಿದ್ದಕ್ಕೆ ನನ್ನ ಸಂಭಾವನೆ ಹೆಚ್ಚಾಯ್ತು. ನನಗೆ ರಾತ್ರೋರಾತ್ರಿ ಸಕ್ಸಸ್ ಸಿಗಲಿಲ್ಲ. ಒಂದೊಂದೇ ಹೆಜ್ಜೆ ಇಟ್ಟುಕೊಂಡು ಬರಬೇಕಾಯಿತು. ಬಳಿಕ ನಾನು ಅದನ್ನು ನೆಕ್ಸ್ಟ್ ಲೆವೆಲ್‌ಗೆ ತೆಗೆದುಕೊಂಡು ಹೋದೆ. ನಮಗೆ ಆ ಸಾಮರ್ಥ್ಯ ಇದ್ದಾಗ ತೋರಿಸೋದ್ರಲ್ಲಿ ತಪ್ಪೇನಿಲ್ಲ. ನಮ್ಮ ಕನ್ನಡ ಇಂಡಸ್ಟ್ರಿ ಚಿಕ್ಕದು ದೊಡ್ಡದು ಅಂತ ವ್ಯತ್ಯಾಸ ತೋರಿಸುತ್ತಿದ್ರಲ್ಲ ಅದಕ್ಕಾಗಿ ನಾವು ದೊಡ್ಡ ಹೆಜ್ಜೆ ಇಡಲು ಮುಂದಾಗಿ ಇಡೀ ಟೀಮ್ ಅನ್ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಒತ್ತಾಯಿಸಿದೆ. ಅಲ್ಲಿಯವರೆಗೆ ಯಾರಿಗೂ ಆ ವಿಶ್ವಾಸ ಇರಲಿಲ್ಲ. ಒಮ್ಮೆ ಕೆಜಿಎಫ್ ಬಂದಾಗ ಆಗ ಇಡೀ ಭಾರತ ನನ್ನನ್ನು ಒಪ್ಪಿಕೊಂಡಿತು ಎಂದಿದ್ದಾರೆ.
