ಬೆಳಗಾವಿ: ನಗರದಲ್ಲಿ ಮತದಾರರ ಪಟ್ಟಿ(Voter List) ಪರಿಷ್ಕರಣೆ ಹಾಗೂ ಬೋಗಸ್ ಮತದಾರರ ವಿಚಾರವಾಗಿ ಕಾಂಗ್ರೆಸ್ (Congress) ಮತ್ತು ಬಿಜೆಪಿ(BJP) ನಡುವೆ ಶುರುವಾಗಿರುವ ರಾಜಕೀಯ ಸಂಘರ್ಷ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಎರಡೂ ಪಕ್ಷಗಳ ನಾಯಕರ ನಡುವೆ ದೂರು-ಪ್ರತಿದೂರು, ಎಫ್‌ಐಆರ್ ದಾಖಲಾಗುತ್ತಿರುವ ಬೆನ್ನಲ್ಲೇ, ಬಿಜೆಪಿ ಕಾರ್ಯಕರ್ತನ ಮನೆಗೆ ವಿಚಾರಣೆಗೆ ತೆರಳಿದ್ದ ಪೊಲೀಸ್ ಪೇದೆಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್(Abhay Patil) ಸಾರ್ವಜನಿಕವಾಗಿ, ಮಾಧ್ಯಮಗಳ ಕ್ಯಾಮೆರಾ ಮುಂದೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಪೊಲೀಸ್ ಕಮಿಷನರ್ ಕಚೇರಿ ಆವರಣದ ಮುಂಭಾಗದಲ್ಲೇ ಈ ಹೈಡ್ರಾಮಾ ನಡೆದಿದೆ. ಮಾರ್ಕೆಟ್ ಪೊಲೀಸ್ ಠಾಣೆಯ ಪೇದೆ ಸುರೇಶ್ ಅವರನ್ನು ತಡೆದು ನಿಲ್ಲಿಸಿದ ಶಾಸಕ ಅಭಯ್ ಪಾಟೀಲ್, ಕಾರ್ಯಕರ್ತರ ಮನೆಗೆ ತೆರಳಿ ಹೇಳಿಕೆ ಪಡೆಯುತ್ತಿರುವುದು ಯಾಕೆ ಎಂದು ಪ್ರಶ್ನಿಸಿ ಕ್ಲಾಸ್ ತೆಗೆದುಕೊಂಡರು.
ನೀವು ಯಾವ ಕಾರಣಕ್ಕೆ ಬಿಜೆಪಿ ಕಾರ್ಯಕರ್ತನ ಮನೆಗೆ ಹೋಗಿದ್ದೀರಿ? ಆತ ಏನಾದರೂ ಮರ್ಡರ್ ಮಾಡಿದ್ದಾನಾ? ಬೋಗಸ್ ಮತದಾರರ ಪರಿಶೀಲನೆ ನಡೆಸಲು ಅಧಿಕಾರ ಇರುವುದು ಚುನಾವಣಾ ಆಯೋಗಕ್ಕೆ ಹೊರತು ಪೊಲೀಸರಿಗಲ್ಲ. ಈ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸಲು ಹೇಗೆ ಸಾಧ್ಯ ಎಂದು ಅಭಯ್ ಪಾಟೀಲ್ ಪ್ರಶ್ನಿಸಿದರು.
ಮತದಾರರ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಅಥವಾ ನಕಲಿ ಮತದಾರರ ಗುರುತಿಸುವಿಕೆ ಸಂಪೂರ್ಣವಾಗಿ ಕೇಂದ್ರ ಚುನಾವಣಾ ಆಯೋಗದ (ECI) ಅಧಿಕಾರ ವ್ಯಾಪ್ತಿಗೆ ಬರುತ್ತದೆ. ನಿಯಮಗಳನ್ನು ಮೀರಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಪೊಲೀಸರು ವಿಪಕ್ಷ ಕಾರ್ಯಕರ್ತರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಅವರು, “ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದು ಏಕಪಕ್ಷೀಯವಾಗಿ ಕೆಲಸ ಮಾಡಬೇಡಿ” ಎಂದು ಪೇದೆಗೆ ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ಮತದಾರರ ಪಟ್ಟಿ ಅಕ್ರಮದ ಕುರಿತು ಎರಡೂ ಪಕ್ಷಗಳಿಂದ ದೂರು-ಪ್ರತಿದೂರುಗಳು ಸಲ್ಲಿಕೆಯಾಗಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
ಆಯುಕ್ತರಿಗೆ ಮನವಿ:
ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ನಿಯೋಗವು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ, ಮತದಾರರ ಪಟ್ಟಿ ಪರಿಶೀಲನೆ (SIR) ನೆಪದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿತು.
ಕಾಂಗ್ರೆಸ್ ನಾಯಕರ ಒತ್ತಡಕ್ಕೆ ತಲೆಬಾಗಿ ಕೇವಲ ದ್ವೇಷದ ರಾಜಕಾರಣಕ್ಕಾಗಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಪೊಲೀಸ್ ಇಲಾಖೆ ತಕ್ಷಣ ಇಂತಹ ಕ್ರಮಗಳಿಂದ ಹಿಂದೆ ಸರಿಯಬೇಕು ಎಂದು ನಿಯೋಗ ಒತ್ತಾಯಿಸಿತು.

