ನಾನು ಕಾಂಗ್ರೆಸ್ಸಿನಲ್ಲೇ ಇರಬೇಕೇ – ಕಾರ್ಯಕರ್ತರ ಬಳಿ ಕೌರವ ಪ್ರಶ್ನೆ

ಹಾವೇರಿ: ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದಿದ್ದು ಸತತ ಮೂರು ಬಾರಿ ಎಂಎಲ್‍ಎ ಆಗಿ ಅಯ್ಕೆಯಾಗಿರುವ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್‍ಗೆ ಸಚಿವ ಸ್ಥಾನ ದೊರಕುತ್ತಿಲ್ಲ. ಇದರಿಂದ ಬೇಸರಗೊಂಡಿರುವ ಪಾಟೀಲ್ ಈಗ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎಲ್ಲ ಕಡೆ ಚರ್ಚೆಯಾಗುತ್ತಿದೆ.

ಈ ಹಿಂದೆ ಸಚಿವ ಸ್ಥಾನದ ಸಿಗದೇ ಇರುವ ಕಾರಣ ಬಿ.ಸಿ ಪಾಟೀಲ್ ಅವರು ಮೈತ್ರಿ ಸರ್ಕಾರದ ಮೇಲೆ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈಗ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ಮತ್ತೆ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿ ಇರಬೇಕಾ? ಬೇಡವೇ ಎಂದು ಕ್ಷೇತ್ರದ ಕಾರ್ಯಕರ್ತರನ್ನು ಮತ್ತು ಕೆಲ ಶಾಸಕರನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಿಂದ ಮೊದಲ ಬಾರಿ ಜೆಡಿಎಸ್‍ನಿಂದ ಶಾಸಕರಾಗಿದ್ದ ಪಾಟೀಲ್, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹೀಗೆ ಮೂರು ಬಾರಿ ಎಂಎಲ್‍ಎ ಆಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಿ.ಸಿ ಪಾಟೀಲ್, ಸಚಿವ ಸ್ಥಾನ ನೀಡದ ಮೈತ್ರಿ ಸರ್ಕಾರದ ಮೇಲೆ ಮೊದಲಿನಿಂದಲೂ ಅಸಮಾಧಾನಗೊಂಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್ ಪಕ್ಷ ಭಾರೀ ಅನ್ಯಾಯ ಮಾಡಿದೆ. ವೀರಶೈವ ಲಿಂಗಾಯತರಿಗೆ ಏಕೆ ಮಂತ್ರಿ ಸ್ಥಾನವನ್ನು ನೀಡಿಲ್ಲ ಎಂದು ಬಹಿರಂಗವಾಗಿ ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ಮೂರು ದಿನಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ. ರಾಜ್ಯ ಹಾಗೂ ದೇಶದಲ್ಲಿ ಮೋದಿ ಅಲೆಗೆ ಕಾಂಗ್ರೆಸ್ ಧೂಳೀಪಟವಾಗಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಮತ್ತು ಅತೃಪ್ತ ಶಾಸಕರು ಚುರುಕುಗೊಂಡಿದ್ದಾರೆ. ಮತ್ತೆ ರೆಸಾರ್ಟ್ ರಾಜಕಾರಣ ಪ್ರಾರಂಭವಾಗಿದೆ. ಈ ಸಮಯದಲ್ಲೇ ಬಿ.ಸಿ ಪಾಟೀಲ್ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಪಕ್ಷದವರು ಕಡೆಗಣಿಸಿದ್ದಾರೆ. ಆದರ ಪ್ರತಿಫಲ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಕಡೆಗೆ ಬಂದಿದೆ. ಹಾಗಾಗಿ ಕ್ಷೇತ್ರದ ಜನರ ತೀರ್ಮಾನವನ್ನು ಕೇಳುತ್ತಿದ್ದೇನೆ ಅವರು ಏನೂ ತೀರ್ಮಾನ ನೀಡುತ್ತಾರೆ ನೋಡೋಣ ಎಂದು ಹೇಳಿದ್ದರು. ಆದರೆ ಕೆಲವು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಹೋಗಿ ಎಂದು ಹೇಳಿದ್ದರೆ, ಇನ್ನೂ ಕೆಲವು ಕಾರ್ಯಕರ್ತರು ನಮ್ಮ ಸಿದ್ದಾಂತ ಬೇರೆ ಹಾಗಾಗಿ ಬಿಜೆಪಿ ಹೋಗುವುದು ಬೇಡ ಎಂದು ಸಲಹೆ ನೀಡಿದ್ದಾರಂತೆ.

ಈ ಎಲ್ಲಾ ವಿದ್ಯಮಾನಗಳು ನೋಡಿದರೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಹೋದರೆ ಬಿ.ಸಿ ಪಾಟೀಲ್ ಬಿಜೆಪಿಗೆ ಹೋಗುತ್ತಾರೆ ಎನ್ನುವ ಗುಸುಗುಸು ಮಾತುಗಳು ಬಹಳ ಚರ್ಚೆ ಆಗುತ್ತಿವೆ. ಆದರೆ ಬಿಸಿ.ಪಾಟೀಲ್ ಮಾತ್ರ ಕಾದುನೋಡುವ ತಂತ್ರ ಅನುಸರಿಸಿ ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *