Connect with us

Belgaum

ತುಂಗಾ ಜಲಾಶಯದ 4 ಗೇಟ್ ಓಪನ್- 2 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ

Published

on

– ಮಹಾ ಮಳೆಗೆ ಬೆಳಗಾವಿ ಜಿಲ್ಲೆಯ 6 ಸೇತುವೆಗಳು ಜಲಾವೃತ

ಶಿವಮೊಗ್ಗ/ ಬೆಳಗಾವಿ: ಮಲೆನಾಡು ಹಾಗೂ ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಗಾಜನೂರು ಸಮೀಪದ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಹೀಗಾಗಿ ಇಂದು 4 ಕ್ರಸ್ಟ್ ಗೇಟ್ ಮೂಲಕ 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ.

ತುಂಗಾ ಜಲಾಶಯ 3.25 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, 100 ಮೀ. ಎತ್ತರವಿದೆ. ಮುಂಗಾರು ಆರಂಭದಲ್ಲಿಯೇ ಜಲಾಶಯ ಭರ್ತಿಯಾಗಿದ್ದು, ಜಲಾಶಯಕ್ಕೆ ಪ್ರತಿದಿನ 7 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿದೆ. ಒಳಹರಿವು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ 7 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಜಲಾಶಯದ 4 ಕ್ರಸ್ಟ್ ಗೇಟ್‍ಗಳ ಮೂಲಕ 2 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹಾಗೂ 4,750 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಬಿಡುಗಡೆ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಳವಾದರೆ ಕ್ರಸ್ಟ್ ಗೇಟ್ ಮೂಲಕ ಮತ್ತಷ್ಟು ನೀರನ್ನು ನದಿಗೆ ಬಿಡಲು ಚಿಂತಿಸಲಾಗುವುದು. ಈಗಾಗಿ ಜಲಾನಯನ ನದಿಪಾತ್ರದ ಜನರು ಮುಂಜಾಗ್ರತೆಯಿಂದ ಇರುವಂತೆ ಜಲಾಶಯದ ಕಾರ್ಯಪಾಲಕ ಅಭಿಯಂತರರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನದಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗದಲ್ಲಿ ಮತ್ತೆರಡು ಸೇತುವೆಗಳು ಜಲಾವೃತಗೊಂಡಿದ್ದು, ಈವರೆಗೂ ಒಟ್ಟು 6 ಸೇತುವೆಗಳು ಜಲಾವೃತಗೊಂಡಿವೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೃಷ್ಣಾ ನದಿ ಮೂಲಕ ರಾಜ್ಯಕ್ಕೆ 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಕಲ್ಲೋಳ-ಯಡೂರ ಹಾಗೂ ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತಗೊಂಡಿವೆ. ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಯ ಹರಿಯುವಿನಲ್ಲಿ ಹೆಚ್ಚಳವಾಗಿರವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿದೆ.

ಜಲಾವೃತವಾದ ಕಲ್ಲೋಳ ಸೇತುವೆ ಮೇಲೆಯೆ ಬೈಕ್, ಕಾರು, ಟ್ರ್ಯಾಕ್ಟರ್ ವಾಹನಗಳು ಹಾಗೂ ಬೆಕಾ ಬಿಟ್ಟಿಯಾಗಿ ಜನರು ಸಂಚಾರಿಸುತ್ತಿದ್ದಾರೆ. ಜೊತೆಗೆ ನದಿಗಿಳಿದು ಯುವಕರು ಸ್ನಾನ ಮಾಡುತ್ತಿದ್ದರೆ, ಮಹಿಳೆಯರು ಬಟ್ಟೆ ತೊಳೆಯುತ್ತಿದ್ದಾರೆ. ಇತ್ತ ಜಿಲ್ಲಾಡಳಿತ ಕಂದಾಯ ಹಾಗೂ ಪೊಲಿಸ್ ಇಲಾಖೆಯ ಯಾವುದೇ ಸಿಬ್ಬಂದಿಯನ್ನು ಪ್ರವಾಹ ಪ್ರದೇಶದಲ್ಲಿ ನಿಯೋಜನೆ ಮಾಡಿಲ್ಲ. ಅಷ್ಟೇ ಅಲ್ಲದೆ ಬ್ಯಾರಿಕೆಡ್ ಸಹ ಅಳವಡಿಸಿಲ್ಲ.

ಬುಧವಾರ ಹಾಗೂ ಇಂದು ಮಹಾ ಮಳೆಗೆ ಚಿಕ್ಕೋಡಿ ಭಾಗದ ಕೆಳಹಂತದ ಆರು ಸೇತುವೆಗಳು ಜಲಾವೃತಗೊಂಡಿವೆ.  ದೂಧಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ-ಭೋಜ, ಕುನ್ನೂರ- ಬಾರವಾಡ, ಭೊಜ- ಹುನ್ನರಗಿ ಕಲ್ಲೋಳ- ಯಡೂರ, ಮಲಿಕವಾಡ-ದತ್ತವಾಡ ಹಾಗೂ ಬಾ.ಸೌಂದತ್ತಿ- ಮಾಂಜರಿ ಸೇತುವೆಗಳು ಜಲಾವೃತಗೊಂಡಿದ್ದು, ಮಳೆಗಾಲ ಆರಂಭವಾಗುತ್ತಿದ್ದಂತಯೇ ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿದೆ.