ಸಾವಿರ ಮರ ಕಡಿಯುತ್ತೇನೆ ಏನ್ ಮಾಡ್ತೀಯಾ ಮಾಡು: ಬಿಜೆಪಿ ಮುಖಂಡನಿಂದ ಅಧಿಕಾರಿಗೆ ಅವಾಜ್

ಶಿವಮೊಗ್ಗ: ಜಿಲ್ಲೆಯ ಶಂಕರ ವಲಯ ಅರಣ್ಯ ವ್ಯಾಪ್ತಿಯ ಅರಣ್ಯಾಧಿಕಾರಿಗೆ ಬಿಜೆಪಿ ಯುವ ಮುಖಂಡನೋರ್ವ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಜನೂರಿನ ಗಣಪತಿ ದೇವಸ್ಥಾನದ ಮುಂಭಾಗದಲ್ಲಿದ್ದ ಮಾವಿನ ಮರವನ್ನು ತುಂಗಾ ಮೇಲ್ದಂಡೆ ಯೋಜನೆಯ ಎಇಇ ಕುಮಾರಸ್ವಾಮಿ ಎಂಬವರು ಕಡಿಸಿದ್ದರು. ಈ ಸಂಬಂಧ ಎಇಇ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ನೋಟಿಸ್ ನೀಡಿತ್ತು.
ಇದರಿಂದ ಸಿಟ್ಟಿಗೆದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿರಾಜ್, ವಲಯ ಅರಣ್ಯಾಧಿಕಾರಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾನೆ. ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದ ಅಧಿಕಾರಿಗೆ, ‘ನೀನು ಸಸ್ಪೆಂಡ್ ಆಗುವುದು ಗ್ಯಾರಂಟಿ. ಮನೆಗೆ ನುಗ್ಗುತ್ತೇವೆ. ನಾನು ಸಾವಿರ ಮರ ಕಡಿಯುತ್ತೇನೆ, ಏನು ಮಾಡ್ತೀಯಾ ಮಾಡು. ನಮ್ಮದೇ ಸರ್ಕಾರ ಇರೋದು ಸರ್ಕಾರಿ ಸಂಬಳಕ್ಕೆ ಕೆಲಸ ಮಾಡುತ್ತಿರುವ ನಿನಗೆ ಇಷ್ಟೊಂದು ಕೊಬ್ಬಾ’ ಎಂದು ಅವಾಜ್ ಹಾಕಿದ್ದಾನೆ.
ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರಿಸರವಾದಿಗಳು ಹಾಗೂ ಸಾರ್ವಜನಿಕರು ಬಿಜೆಪಿ ಯುವ ಮುಖಂಡನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತುಂಗಾ ನಗರ ಠಾಣೆಯಲ್ಲಿ ಬೆದರಿಕೆ ಹಾಗು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಡಿ ಬಿಜೆಪಿ ಯುವ ಮುಖಂಡ ಗಿರಿರಾಜ್ ವಿರುದ್ಧ ದೂರು ದಾಖಲಾಗಿದೆ.