ಚಿಕ್ಕಬಳ್ಳಾಪುರ: ಸೆಲ್ಫಿ ತೆಗೆಯುವಾಗ ಜಲಪಾತದಿಂದ ನೂರು ಅಡಿ ಆಳಕ್ಕೆ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಬಳಿಯ ಚನ್ನಗಿರಿ ಬೆಟ್ಟದಲ್ಲಿ ನಡೆದಿದೆ.
ವಿಶ್ವವಿಖ್ಯಾತ ನಂದಿಗಿರಿಧಾಮ ಪಕ್ಕದ ಚನ್ನಗಿರಿ ಬೆಟ್ಟದಲ್ಲಿ ಕಳೆದ ಒಂದು ತಿಂಗಳಿನಿಂದ ಜಲಪಾತ ಸೃಷ್ಟಿಯಾಗಿದ್ದು, ಜಲಪಾತ ನೋಡಲು ಬಂದಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಸೆಲ್ಫಿ ಕ್ರೇಜ್ ಗೆ ಬಲಿಯಾಗಿದ್ದಾನೆ. ದೊಡ್ಡಬಳ್ಳಾಪುರ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ನವೀನ್ (23) ಮೃತ ವಿದ್ಯಾರ್ಥಿ.
Advertisement
Advertisement
ಕಾಲೇಜು ವಿದ್ಯಾರ್ಥಿಗಳೊಂದಿಗೆ ಚನ್ನಗಿರಿ ಬೆಟ್ಟದ ಫಾಲ್ಸ್ ಗೆ ಆಗಮಿಸಿದ್ದ ನವೀನ್ ಅಲ್ಲೇ ನೀರಿನಲ್ಲಿ ಆಟವಾಡುತ್ತ, ಅರ್ಧ ಮಟ್ಟ ಏರಿ ಅಲ್ಲಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಪಾಚಿ ಕಟ್ಟಿದ ಕಲ್ಲಿನ ಮೇಲೆ ಕಾಲಿಟ್ಟ ಪರಿಣಾಮ ಆಯತಪ್ಪಿ ಜಲಪಾತದಿಂದ ನೂರು ಅಡಿ ಆಳದ ಕೆಳಕ್ಕೆ ಬಿದ್ದು ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Advertisement
Advertisement
ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಮಳೆಗಾಲ ಆರಂಭದ ನಂತರ ಈ ಜಲಪಾತ ಆರಂಭವಾಗಿದ್ದು, ಜಲಪಾತ ನೋಡಲು ಪ್ರತಿದಿನ ನೂರಾರು ಮಂದಿ ಚನ್ನಗಿರಿ ಬೆಟ್ಟಕ್ಕೆ ಲಗ್ಗೆಯಿಡುತ್ತಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಲ್ಲೇ 3 ಮಂದಿ ಮೃತಪಟ್ಟಿದ್ದಾರೆ ಅಂತ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.