ಮಡಿಕೇರಿ: ಕೊಡಗಿನಲ್ಲಿ ಮುಂಗಾರು (Monsoon) ಪ್ರಾರಂಭವಾಗಿದ್ದು, ಮುಂದಿನ ಮಳೆಗಾಲದ ದಿನಗಳಲ್ಲಿ ನದಿ ಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದೆ. ಈ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಯ ಹಿತದೃಷ್ಟಿಯಿಂದ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಾಟ ಮತ್ತು ಇತರೆ ಸರಕು ಸಾಗಾಟ ಮಾಡುವ ಭಾರಿ ವಾಹನಗಳ (Heavy Vehicles) ಸಂಚಾರವನ್ನು ಕೊಡಗು (Kodagu) ಜಿಲ್ಲೆಯಾದ್ಯಂತ ನಿಷೇಧಿಸಿ ಕೊಡಗು ಡಿಸಿ ಆದೇಶ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತದೆಯಲ್ಲದೆ ಅಧಿಕ ಭಾರ ತುಂಬಿದ ಭಾರಿ ಸರಕು ಸಾಗಾಟ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು ಕುಸಿತದಿಂದಾಗಿ ರಸ್ತೆಯ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆಕ್ಟ್, ಮೋಟಾರು ವಾಹನಗಳ ಕಾಯಿದೆ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಪ್ರಕಾರ ಸ್ಥಳೀಯರ, ವಾಹನ ಸವಾರರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಾದ್ಯಂತ ಇಂದಿನಿಂದ ಜುಲೈ 9ರವರೆಗೆ ವಾಹನ ಸಂಚಾರ ವ್ಯವಸ್ಥೆ ನಿರ್ವಹಿಸಲು ಜಿಲ್ಲಾದಂಡಾಧಿಕಾರಿ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ. ಇದನ್ನೂ ಓದಿ: ಕಸ ಸಂಸ್ಕರಣೆ ನೆಪದಲ್ಲಿ 39,000 ಕೋಟಿ ಹಗರಣ – 10,000 ಕೋಟಿ ಕಿಕ್‌ಬ್ಯಾಕ್: ಆರ್.ಅಶೋಕ್ ಬಾಂಬ್
ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 18,500 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಟ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್, ಶಿಪ್ ಕಾರ್ಗೋ ಕಂಟೈನರ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳು/ಆರ್ಟಿಕ್ಯೂಲೇಟೆಡ್ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ನಿರ್ಬಂಧದಿಂದ ವಿನಾಯಿತಿ ನೀಡಿದ ವಾಹನಗಳು ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳಿಗೆ ಸೂಚನಾ ಫಲಕ ಅಳವಡಿಸಲು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದೆ. ಇದನ್ನೂ ಓದಿ: ನೆಹರೂ ದಾಖಲೆ ಮುರಿದ ಮೋದಿ – ಪ್ರಧಾನಿಗಳಿಗೆ ಕೇಂದ್ರ ಸಚಿವ ಹೆಚ್‌ಡಿಕೆ ಅಭಿನಂದನೆ
ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‌ಪೋಸ್ಟ್ ನಿರ್ಮಿಸಿ, ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಿದೆ. ಈ ಆದೇಶಗಳನ್ನು ಪಾಲನೆ ಮಾಡದೆ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಕೊಡಗು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ.. ಕಾಡಾನೆ ಬಳಿಕ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ
