ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ (Charmadi Ghat) ಮೂಡಿಗೆರೆ ಅರಣ್ಯ ವಲಯದ (Mudigere Forest) ರಸ್ತೆ ತಡೆಗೋಡೆ ಬಳಿ ಚಿರತೆ (Leopard) ಕಾಣಿಸಿಕೊಂಡಿದೆ. ಚಿರತೆಯನ್ನು ಕಂಡ ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ.
ಇಷ್ಟು ದಿನಗಳ ಕಾಲ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ರಸ್ತೆ ಮಧ್ಯೆ ಗಂಟೆಗಟ್ಟಲೇ ನಿಂತು ವಾಹನ ಸವಾರರಲ್ಲಿ ಆತಂಕ ಸೃಷ್ಟಿಸುತ್ತಿತ್ತು. ಇದೀಗ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಹಾಗೂ ವಾಹನ ಸವಾರರ ಆತಂಕ ಹೆಚ್ಚಾಗಿದೆ. ಚಿರತೆಯ ಫೋಟೋ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ – ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್!
ಮಳೆಗಾಲ ಆರಂಭವಾಗಿರುವುದರಿಂದ ಘಾಟಿಯಲ್ಲಿ ದಟ್ಟ ಮಂಜು ಇರುತ್ತದೆ. ಈ ಸಮಯದಲ್ಲಿ ರಸ್ತೆ ಕಾಣದಂತಹಾ ಸ್ಥಿತಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಕಾಡುಪ್ರಾಣಿಗಳ ಚಲನವಲನಗಳು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ. ಆದರೂ, ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಪ್ರವಾಸಿಗರು ಫೋಟೋ ಹಾಗೂ ಸೆಲ್ಫಿಗಾಗಿ ವಾಹನಗಳನ್ನು ನಿಲ್ಲಿಸಿ ಕೆಳಗಿಳಿಯುತ್ತಿರುವುದು ಅನಾಹುತಕ್ಕೆ ಕಾರಣವಾಗಬಹುದು.
ಕೆಲ ಪ್ರವಾಸಿಗರು ಫೋಟೋಗಾಗಿ ಬಂಡೆ ಮೇಲೆ ಹತ್ತುತ್ತಾರೆ. ಈ ವೇಳೆ ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇರಲಿದೆ. ಜಾರಿ ಬೀಳುವ ಸಂಭವವೂ ಇರುತ್ತದೆ. ಪ್ರಾವಾಸಿಗರು ಜಾಗ್ರತೆಯಿಂದ ಸಂಚರಿಸಬೇಕು ಎಂದು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನೆಲಮಂಗಲ ತಾಲೂಕಿನಲ್ಲಿ ಚಿರತೆ ಹಾವಳಿ; ಜನರಲ್ಲಿ ಆತಂಕ
