– ಸಾಲದ ಒತ್ತಡಕ್ಕೆ ಕುಟುಂಬವೇ ಬಲಿಯಾಯಿತೇ?
ಮೈಸೂರು : ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಮೈಸೂರು(Mysuru) ಜಿಲ್ಲೆಯ ಹುಣಸೂರಿನಲ್ಲಿ ಆಘಾತ ಮೂಡಿಸಿದೆ. ಸಾಲದ ಒತ್ತಡವೇ ಈ ದುರಂತಕ್ಕೆ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಹರೀಶ್ (49), ಪತ್ನಿ ನಿಶ್ಚಿತ (36), ಪುತ್ರಿಯರಾದ ನೆಕ್ಸಾ (13) ಮತ್ತು ರಕ್ಷಾ (6) ಮೃತ ದುರ್ದೈವಿಗಳು. ಹರೀಶ್ ಮೊದಲು ಪತ್ನಿ ಹಾಗೂ ಇಬ್ಬರು ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹುಣಸೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ (I am hanging upstairs room (ನಾನು ಮೇಲಿನ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದೇನೆ) ಹರೀಶ್ ಬರೆದಿದ್ದಾನೆ. ಸಾಲದ ಒತ್ತಡ ಹಾಗೂ ಆಸ್ತಿ ಸಂಬಂಧ ಕೆಲವು ವಿವರಗಳನ್ನು ಬರೆದಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಎಲ್ಲಾ ದಾಖಲೆಗಳು ಲಾಕರ್‌ನಲ್ಲಿ ಇವೆ ಎಂದು ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಮದ್ಯ ಕುಡಿಸಿ ಬಾಲಕಿಯ ಮೇಲೆ ಇಡೀ ರಾತ್ರಿ ಅತ್ಯಾಚಾರ – ಮಹಿಳೆ ಸೇರಿ ಮೂವರು ಪಾಪಿಗಳು ಅರೆಸ್ಟ್
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಹರೀಶ್ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಒಂದು ಸೈಟ್ ವಿಚಾರದಲ್ಲಿ ಸಾಲ ಹೆಚ್ಚಾಗಿದ್ದ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖವಿದೆ. ಅವರ ಹೆಸರಿನಲ್ಲಿ ಮೂರು ಸೈಟ್, ಸ್ವಂತ ಮನೆ ಮತ್ತು ಕಾರು ಇದ್ದು, ಅವುಗಳನ್ನು ಯಾರಿಗೆ ನೀಡಬೇಕು ಎಂಬುದನ್ನೂ ಬರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸುಮಾರು 14 ವರ್ಷಗಳ ಹಿಂದೆ ಹರೀಶ್ ಮತ್ತು ನಿಶ್ಚಿತ ವಿವಾಹವಾಗಿದ್ದರು. ಕುಟುಂಬದೊಂದಿಗೆ ಹರೀಶ್ ಅವರ ತಾಯಿಯೂ ವಾಸವಾಗಿದ್ದರು. ಆದರೆ ಘಟನೆಗೆ ಎರಡು ದಿನಗಳ ಮೊದಲು ಅವರು ಪ್ರವಾಸಕ್ಕೆ ತೆರಳಿದ್ದರಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಘಟನೆಗೆ ನಿಖರ ಕಾರಣ ಏನು? ಕೌಟುಂಬಿಕ ಕಲಹವೇ ಅಥವಾ ಆರ್ಥಿಕ ಒತ್ತಡವೇ? ಎಂಬ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದಲಿತರ ಭೂಮಿ ಅಕ್ರಮ ಒತ್ತುವರಿ ಆರೋಪ – ಆರ್ಟ್ ಆಫ್ ಲೀವಿಂಗ್ ವಿರುದ್ಧ SIT ತನಿಖೆಗೆ ಆದೇಶ
