ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದ (POK) ಮುಜಾಫರಾಬಾದ್ (Muzaffarabad) ಸಮೀಪ ಬುಧವಾರ ಪಾಕಿಸ್ತಾನ ಸೇನೆಗೆ ಸೇರಿದ MI-17 ಹೆಲಿಕಾಪ್ಟರ್ (MI-17 Helicopter) ತಾಂತ್ರಿಕ ದೋಷದಿಂದ ಪತನಗೊಂಡಿದ್ದು, 21 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಸೇನೆಯ ಪ್ರಕಟಣೆಯ ಪ್ರಕಾರ, ಹೆಲಿಕಾಪ್ಟರ್ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ವರದಿಗಳು ತಿಳಿಸಿವೆ.
ಮುಜಾಫರಾಬಾದ್‌ನ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ಅಪಘಾತದ ಬಳಿಕ ಭಾರೀ ಸದ್ದು ಕೇಳಿಬಂದಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ತಕ್ಷಣವೇ ಅಂಬುಲೆನ್ಸ್‌ಗಳು ಮತ್ತು ರಕ್ಷಣಾ ತಂಡಗಳು ಧಾವಿಸಿವೆ. ಗಾಯಾಳುಗಳು ಹಾಗೂ ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿರುವುದಾಗಿ ಸೇನೆ ದೃಢಪಡಿಸಿದೆ.
A Pakistan Army Mi-17 helicopter crashed in Muzaffarabad, Azad Kashmir, killing all 21 on board. pic.twitter.com/QpiPb9PnM9
— Open Source Intel (@Osint613) June 10, 2026
ದುರಂತದ ಕುರಿತು ಪಾಕಿಸ್ತಾನದ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಶರೀಫ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹುತಾತ್ಮರಾದ ಸೇನಾ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಂ ಮುನೀರ್ ಕೂಡ ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತ ಸೈನಿಕರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಅವರ ತ್ಯಾಗವನ್ನು ಸ್ಮರಿಸಿದ್ದಾರೆ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.
ತನಿಖೆ ಪೂರ್ಣಗೊಂಡ ಬಳಿಕ ಅಪಘಾತದ ನಿಖರ ಕಾರಣ ಹಾಗೂ ಹೆಲಿಕಾಪ್ಟರ್‌ನಲ್ಲಿದ್ದ ಸಿಬ್ಬಂದಿಯ ವಿವರಗಳು ಬಹಿರಂಗಗೊಳ್ಳುವ ಸಾಧ್ಯತೆ ಇದೆ.
