ಮಡಿಕೇರಿ: ಕೊಡಗು (Kodagu) ಜಿಲ್ಲೆಯ ನಾಪೋಕ್ಲು ಸಮೀಪದ ಚೆರಿಯಪರಂಬು (Rian Effect)ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಗ್ರಾಮಸ್ಥರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆ ನೀರು ಹಾಗೂ ರಸ್ತೆಗೆ ಸುರಿದ ಮಣ್ಣು ಸೇರಿ ರಸ್ತೆ ಹದಗೆಟ್ಟಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಚಾರವೇ ದುಸ್ತರವಾಗಿದೆ.
ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೆರಿಯಪರಂಬು ಗ್ರಾಮಕ್ಕೆ ತೆರಳುವ ಪ್ರಮುಖ ರಸ್ತೆಯುದ್ದಕ್ಕೂ ಹೊಂಡ-ಗುಂಡಿಗಳು ನಿರ್ಮಾಣವಾಗಿವೆ. ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರಿನ ಹೊಂಡವಾಗಿ ಮಾರ್ಪಟ್ಟಿದ್ದು, ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಇದೇ ಮಾರ್ಗದಲ್ಲಿ ಪ್ರತಿದಿನ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೂ ತೊಂದರೆ ಎದುರಾಗಿದೆ. ನಡೆದುಕೊಂಡು ಹೋಗುವುದಕ್ಕೂ ಕಷ್ಟವಾಗಿರುವುದರಿಂದ ಮಕ್ಕಳು ಕೆಸರು ರಸ್ತೆಯಲ್ಲೇ ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. ಇದರ ನಡುವೆ ಖಾಸಗಿ ಶಾಲೆಯೊಂದರ ಬಸ್ ಕೂಡ ಕೆಸರಿನಲ್ಲಿ ಸಿಲುಕಿಕೊಂಡಿದೆ. ಬಸ್ ಅನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಈ ದೃಶ್ಯ ಗ್ರಾಮಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದನ್ನೂ ಓದಿ: ಹಾವೇರಿ | ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಮೂವರು ಸ್ಥಳದಲ್ಲೇ ದುರ್ಮರಣ
ರಸ್ತೆಗೆ ಮಣ್ಣು ಸುರಿದ ಬಳಿಕ ಸಮರ್ಪಕವಾಗಿ ಕಾಮಗಾರಿ ನಡೆಸದಿರುವುದೇ ಈ ಸಮಸ್ಯೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಳೆ ಬಂದಾಗಲೆಲ್ಲಾ ಇದೇ ಸಮಸ್ಯೆ ಎದುರಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.
ಚೆರಿಯಪರಂಬು ಗ್ರಾಮಸ್ಥರ ನಿತ್ಯದ ಸಂಚಾರಕ್ಕೆ ಇದೇ ಪ್ರಮುಖ ರಸ್ತೆಯಾಗಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಪರಿಶೀಲಿಸಿ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ; 7 ಪ್ರಯಾಣಿಕರು ಪಾರು

