ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಉತ್ತರಾಖಂಡದಲ್ಲಿ ಪ್ರಚಾರ ಸಭೆ ನಡೆಸಿದ್ದ ವೇದಿಕೆಯನ್ನು ‘ಶುದ್ಧೀಕರಣ’ಗೊಳಿಸಿದ ವಿವಾದದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ (Congress) ಎಸ್‌ಸಿ ಮತ್ತು ಎಸ್‌ಟಿ ಸಂಸದರು ಇಂದು ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರನ್ನು ದಾಖಲಿಸಿದ್ದಾರೆ.
ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಸಮಯ ಸಿಗದ ಹಿನ್ನೆಲೆಯಲ್ಲಿ, ಸಂಸದರು ನೇರವಾಗಿ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ.
ತೆಲಂಗಾಣದ ನಾಗರಕರ್ನೂಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಡಾ. ಮಲ್ಲು ರವಿ ಅವರ ನೇತೃತ್ವದಲ್ಲಿ ದೂರು ನೀಡಲಾಗಿದೆ.
ಕಾಂಗ್ರೆಸ್‌ನ ಎಸ್‌ಸಿ-ಎಸ್‌ಟಿ ಸಂಸದೀಯ ವೇದಿಕೆಯ ಸುಮಾರು 20ಕ್ಕೂ ಹೆಚ್ಚು ಸಂಸದರು ಮತ್ತು ಹಿರಿಯ ನಾಯಕರು ಒಟ್ಟಾಗಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ಘಟನೆಯು ಸಂವಿಧಾನದ ಅಸ್ಪೃಶ್ಯತೆ ನಿರ್ಮೂಲನೆ ತತ್ವಕ್ಕೆ ವಿರುದ್ಧವಾಗಿದ್ದು, ತಾರತಮ್ಯವನ್ನು ಉತ್ತೇಜಿಸುತ್ತದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ (FIR) ದಾಖಲಿಸಬೇಕೆಂದು ಲಿಖಿತ ದೂರು ಸಲ್ಲಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ನಾಯಕ ರಾಜೇಂದ್ರ ಪಾಲ್ ಮಾಧ್ಯಮಗಳೊಂದಿಗೆ ಮಾತನಾಡಿ, ʼʼನಿನ್ನೆ (ಸೋಮವಾರ) ನಮ್ಮ ಎಸ್‌ಸಿ/ಎಸ್‌ಟಿ ಸಂಸದೀಯ ವೇದಿಕೆಯು ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಸಮಯಾವಕಾಶ ಕೋರಿತ್ತು. ಆದರೆ, ಇಂದಿನವರೆಗೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ, ಕಾನೂನಿನಡಿಯಲ್ಲಿ ಹೋರಾಟ ನಡೆಸಲು ಮುಂದಾಗಿದ್ದೇವೆʼʼ ಎಂದು ತಿಳಿಸಿದರು.
ಏನಿದು ವಿವಾದ?
ಆಗಸ್ಟ್ 8 ರಂದು ಪರಿಶಿಷ್ಟ ಜಾತಿಗೆ (SC) ಸೇರಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೆ, ಆಗಸ್ಟ್ 10 ರಂದು ‘ಶ್ರೀರಾಮ್ ಧರ್ಮಾರ್ಥ ಸೇವಾ ನ್ಯಾಸ್’ ಅಧ್ಯಕ್ಷ ಗಿರೀಶ್ ಚಂದ್ರ ಪಾಂಡೆ ಮತ್ತು ಇತರ 15 ವ್ಯಕ್ತಿಗಳು ಸೇರಿ, ಖರ್ಗೆ ಅವರು ಭೇಟಿ ನೀಡಿದ್ದ ಮೈದಾನವನ್ನು ಗಂಗಾಜಲ ಮತ್ತು ಯಜ್ಞದ ಮೂಲಕ “ಶುದ್ಧೀಕರಣ” ನಡೆಸಿದ್ದರು. ಇದರಿಂದ ರಾಹುಲ್ ಗಾಂಧಿಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ವಜ್ರ ಮುಚ್ಚಿಟ್ಟುಕೊಂಡು ಸ್ಪರ್ಧಿಗಳನ್ನ ಆಟವಾಡಿಸಿದ ಗಗನ್ ಚಿನ್ನಪ್ಪ
ಹಲ್ದ್ವಾನಿ ಘಟನೆಯನ್ನು ಖಂಡಿಸಿ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ದೂರು ನೀಡಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ವಿಧಾನ ಸೌಧ ಪೊಲೀಸ್ ಠಾಣೆಯಲ್ಲೂ ಉತ್ತರಾಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಮತ್ತು ಇತರರ ವಿರುದ್ಧ ಇದೇ ವಿಷಯವಾಗಿ ‘ಜೀರೋ ಎಫ್‌ಐಆರ್’ (Zero FIR) ದಾಖಲಾಗಿದೆ.ಇದನ್ನೂ ಓದಿ: ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿ ಭಾಗಶಃ ಅಂಗೀಕಾರ
