– ಸಿಡಿ ಸ್ಟಿಂಗ್ ಹಿಂದೆ ಒಂದೇ ಫ್ಯಾಕ್ಟರಿ, ಪಾರ್ಟ್ನರ್ಸ್ ಬೇರೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್(Sting Operation) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ (KN Rajanna) ಗಂಭೀರ ಹಾಗೂ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.
ಸಿಡಿ ಹಾಗೂ ಸ್ಟಿಂಗ್ ಆಪರೇಷನ್ಗಳಿಗೆ ರಾಜ್ಯದಲ್ಲಿ ಒಂದೇ ಫ್ಯಾಕ್ಟರಿ ಇದೆ, ಆದರೆ ಅದರಲ್ಲಿ ಪಾರ್ಟ್ನರ್ಗಳು ಮಾತ್ರ ಬೇರೆ ಬೇರೆ ಎಂದು ಆರೋಪಿಸುವ ಮೂಲಕ ವಿರೋಧಿಗಳಿಗೆ ಗುದ್ದು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ (Stay) ತಂದಿರುವ ವಿಚಾರವನ್ನು ಪ್ರಸ್ತಾಪಿಸಿದರು. “ಸ್ಟಿಂಗ್ ಆಗಿರುವುದಕ್ಕಾಗಿಯೇ ಸಿದ್ದರಾಮಯ್ಯನವರು ಸ್ಟೇ ಪಡೆದುಕೊಂಡಿದ್ದಾರೆ. ಇದು ಹೊಸದೇನಲ್ಲ, ಹಿಂದೆ ಸ್ಟಿಂಗ್ ಆಪರೇಷನ್ ಮಾಡಿಯೇ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಲಾಯಿತೇ ಎಂಬ ಅನುಮಾನವೂ ಇರಬಹುದು, ಅದನ್ನು ತಳ್ಳಿಹಾಕಲು ಸಾಧ್ಯವಿಲ್ಲ” ಎಂದರು. ಇದನ್ನೂ ಓದಿ: ಅವಹೇಳನಕಾರಿ ಪೋಸ್ಟ್ಗಳ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ
ಈ ಇಡೀ ಬೆಳವಣಿಗೆಯನ್ನು ‘ಬ್ಲ್ಯಾಕ್ಮೇಲ್ ತಂತ್ರ’ ಎಂದು ಬಣ್ಣಿಸಿದ ಅವರು, “ಮುಖ್ಯಮಂತ್ರಿಗಳ ಬಳಿ ಎಲ್ಲಾ ತನಿಖಾ ಸಂಸ್ಥೆಗಳಿದೆ. ಜನರಲ್ಲಿರುವ ಗೊಂದಲವನ್ನು ಅವರೇ ತನಿಖೆ ಮಾಡಿಸಿ ದೂರ ಮಾಡಬೇಕು. ರಮೇಶ್ ಜಾರಕಿಹೊಳಿ ಅವರ ಸಿಡಿಯನ್ನು ಯಾರು ಮಾಡಿಸಿದ್ದು ಎಂದು ನೀವೇ ಹೇಳಿ? ಅವರದ್ದು ಮಾಡಿಸಿದವರೇ ಈಗ ಸಿದ್ದರಾಮಯ್ಯನವರದ್ದನ್ನೂ ಮಾಡಿಸಿದ್ದಾರೆ. ಇದರಿಂದ ಇಡೀ ಕರ್ನಾಟಕದ ಮಾನ-ಮರ್ಯಾದೆ ಹರಾಜಾಗುತ್ತಿದೆ, ನಮ್ಮ ಗೌರವವನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ. ಸಿಎಂ ಅವರೇ ಅಸಹಾಯಕರಂತೆ ಮಾತನಾಡಿದರೆ ಹೇಗೆ? ತನಿಖೆ ನಡೆಸಿ ಎಲ್ಲವನ್ನೂ ಬಹಿರಂಗಪಡಿಸಿದರೆ ಈ ಸ್ಟಿಂಗ್ ದಂಧೆ ಇಲ್ಲಿಗೇ ನಿಲ್ಲುತ್ತದೆ ಎಂದು ಆಗ್ರಹಿಸಿದರು.

