Connect with us

Latest

ಮಾಜಿ ರಣಜಿ ಕ್ರಿಕೆಟಿಗ, ಎಡಗೈ ಸ್ಪಿನ್ನರ್ ಶವ ಮನೆಯಲ್ಲಿ ಪತ್ತೆ

Published

on

Share this

– ದ್ರಾವಿಡ್‍ರೊಂದಿಗೆ ಅಂಡರ್ -19 ತಂಡದಲ್ಲಿದ್ರು

ತಿರುವನಂತಪುರಂ: ರಾಹುಲ್ ದ್ರಾವಿಡ್ ಅವರೊಂದಿಗೆ ಅಂಡರ್ -19 ತಂಡದ ಭಾಗವಾಗಿದ್ದ ಮಾಜಿ ರಣಜಿ ಕ್ರಿಕೆಟಿಗ ಎಂ.ಸುರೇಶ್ ಕುಮಾರ್ ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸುರೇಶ್ ಕುಮಾರ್ (47) ಕೇರಳದ ಆಲಪ್ಪುಳ ಬಳಿಯ ತಮ್ಮ ನಿವಾಸದಲ್ಲಿ ಬೆಡ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುರೇಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕ್ರಿಕೆಟಿಗ ಸುರೇಶ್ ಕುಮಾರ್ ಶವವನ್ನು ಅವರ ಮಗ ಮೊದಲು ನೋಡಿದ್ದಾರೆ. ಇದು ಆತ್ಮಹತ್ಯೆ ಎನ್ನಲಾಗಿದೆ. ಆದರೆ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟಿಗ ಸುರೇಶ್ ಕುಮಾರ್ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡಿದ್ದರು. ಆಲಪ್ಪುಳ ಮೂಲದ ಸುರೇಶ್ ಕುಮಾರ್ ಎಡಗೈ ಸ್ಪಿನ್ನರ್ ಆಗಿ ಮಿಂಚಿದ್ದಾರೆ. 1991-92 ರಿಂದ 2005-06ರವರೆಗೆ 72 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು, 1,657 ರನ್ ಗಳಿಸಿ 196 ವಿಕೆಟ್ ಪಡೆದುಕೊಂಡಿದ್ದಾರೆ. ಅಲ್ಲದೇ 1995-96ರ ರಾಜಸ್ಥಾನ ವಿರುದ್ಧದ ರಣಜಿ ಟ್ರೋಫಿ ಕಪ್‍ನಲ್ಲಿ ಕೇರಳ ಪರ ಆಡಿದ ಸುರೇಶ್ ಕುಮಾರ್ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ದರು.

ಕೇರಳದ ಪರ 52 ಪಂದ್ಯಗಳನ್ನು ಮತ್ತು ರಣಜಿ ಟ್ರೋಫಿಯಲ್ಲಿ ರೈಲ್ವೆ ಪರ 17 ಪಂದ್ಯಗಳನ್ನು ಆಡಿದ್ದರು. ಅಲ್ಲದೇ ದಕ್ಷಿಣ ವಲಯ ಮತ್ತು ಕೇಂದ್ರ ವಲಯವನ್ನು ಪ್ರತಿನಿಧಿಸುವ ದುಲೀಪ್ ಟ್ರೋಫಿಯಲ್ಲೂ ಸಹ ಆಡಿದ್ದರು. 1992 ರಲ್ಲಿ ನಡೆದ ಭಾರತ ಅಂಡರ್ -19 ಟೆಸ್ಟ್ ಮತ್ತು ಏಕದಿನ ತಂಡಗಳಲ್ಲೂ ಅವರು ಕಾಣಿಸಿಕೊಂಡಿದ್ದರು.

‘ಉಂಬ್ರಿ’ ಎಂದು ಸುರೇಶ್ ಕುಮಾರ್ ಖ್ಯಾತಿ ಪಡೆದುಕೊಂಡಿದ್ದು, 90ರ ದಶಕದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅಂಡರ್ -19 ತಂಡವನ್ನು ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕಿಕೆಟ್‍ನಲ್ಲಿ ಕೇರಳವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದರು.

1994-95ರ ರಣಜಿ ಆವೃತ್ತಿಯಲ್ಲಿ ಕೇರಳದ ಮೊದಲ ಬಾರಿಗೆ ರಣಜಿ ಟ್ರೋಫಿ ಗೆಲ್ಲಲು ಸುರೇಶ್ ಕುಮಾರ್ ಪಾತ್ರ ದೊಡ್ಡದಿತ್ತು. ಇವರು ದಕ್ಷಿಣ ಭಾರತದ ಅತ್ಯುತ್ತಮ ಎಡಗೈ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದರು. 2005ರಲ್ಲಿ ಜಾರ್ಖಾಂಡ್ ವಿರುದ್ಧ ಪಾಲಕ್ಕಾಡ್ ಕ್ರಿಕೆಟ್‍ನಲ್ಲಿ ನಡೆದ ಪಂದ್ಯದ ಬಳಿಕ ಕ್ರಿಕೆಟ್‍ಗೆ ವಿದಾಯವನ್ನು ಘೋಷಿಸಿದ್ದರು. ನಂತರ ಅವರು ಭಾರತೀಯ ರೈಲ್ವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

Click to comment

Leave a Reply

Your email address will not be published. Required fields are marked *

Advertisement