ಹಾಸನ: ಬೇಲೂರು (Beluru) ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಾವಳಿ ಮಾಡುತ್ತಿರುವ ಪುಂಡಾನೆಗಳ (Elephant) ನಿಯಂತ್ರಣಕ್ಕೆ ಅರಣ್ಯ ಇಲಾಖೆ (Forest Department) ಕಾರ್ಯಾಚರಣೆ ಆರಂಭಿಸಿದೆ. ಮೊದಲ ದಿನದ ಕಾರ್ಯಾಚರಣೆಯಲ್ಲೇ ಭುವನೇಶ್ವರಿ ಗುಂಪಿನ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ ಯಶಸ್ವಿಯಾಗಿದೆ.
2023 ಜುಲೈ ತಿಂಗಳಿನಲ್ಲಿ ಭುವನೇಶ್ವರಿ ಗುಂಪಿನ ಕಾಡಾನೆಗೆ ವಿದೇಶಿ ನಿರ್ಮಿತ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ರೇಡಿಯೋ ಕಾಲರ್‌ನ ಬ್ಯಾಟರಿ ಅವಧಿ ಪೂರ್ಣಗೊಂಡು ಕಾರ್ಯ ನಿರ್ವಹಿಸದ ಕಾರಣ, ಆನೆಯ ನಿಖರ ಚಲನವಲನ ಹಾಗೂ ಸ್ಥಳವನ್ನು ರೇಡಿಯೋ ಟೆಲಿಮೆಟ್ರಿ ಮೂಲಕ ನಿರಂತರವಾಗಿ ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸಾಧ್ಯವಾಗುತ್ತಿರಲಿಲ್ಲ. ಇದನ್ನೂ ಓದಿ: ಮಿತಿ ಮೀರಿದ ʻಕೆ.ಪಿ ಕಾಲರ್ʼ ಪುಂಡಾಟ – ಸೆರೆಗೆ ಕುಮ್ಕಿ ಆನೆಗಳ ತಂಡ ಆಗಮನ

ಈ ಹಿನ್ನೆಲೆಯಲ್ಲಿ ಕಾಡಾನೆಯ ಚಲನವಲನವನ್ನು ಗುರುತಿಸಿ, ಮಾನವ ಕಾಡಾನೆ ನಡುವಿನ ಸಂಘರ್ಷ ತಪ್ಪಿಸುವ ದೃಷ್ಟಿಯಿಂದ, ಭುವನೇಶ್ವರಿಯ ಹಿಂಡಿನಲ್ಲಿರುವ ಮತ್ತೊಂದು ಆನೆಗೆ ಹೊಸ ರೇಡಿಯೋ ಕಾಲರ್ ಅಳವಡಿಸಲಾಯಿತು.
ನಾಗರಹೊಳೆ ಶಿಬಿರದಿಂದ ಏಕಲವ್ಯ ಹಾಗೂ ದುಬಾರೆ ಆನೆ ಶಿಬಿರದಿಂದ ಪ್ರಶಾಂತ, ಧನಂಜಯ, ಈಶ್ವರ, ಲಕ್ಷ್ಮಣ ಮತ್ತು ಅಜ್ಜಯ್ಯ ಎಂಬ ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿತ್ತು. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಇನ್ನೂ ಪುಂಡಾನೆ ಕೆ.ಪಿ ಕಾಲರ್ 2 ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಹಗಲು ವಿಶ್ರಾಂತಿ, ರಾತ್ರಿ ವೇಳೆ ಪುಂಡಾಟ – ಸಿಕ್ಕಸಿಕ್ಕ ವಾಹನ, ಜನರ ಮೇಲೆ ʻಗಜಾಸುರʼನ ಅಟ್ಟಹಾಸ

