– ಸಿದ್ರಾಮಯ್ಯ ಸಿಎಂ ಆದ್ರೆ 60,000 ಕೋಟಿಯಷ್ಟು ತೆರಿಗೆ ವಿಧಿಸಲು ತಯಾರಿ
– ಕಾಂಗ್ರೆಸ್ & ಕಾಕ್ರೋಚ್ ಪಾರ್ಟಿಗಳು ಪಾಕಿಸ್ತಾನದ ಟೂಲ್‌ಕಿಟ್ ಅಂತ ಲೇವಡಿ
ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ ಲಾಭ ಇಲ್ಲ, ಲಾಭ ಇರೋದು ರಾಜ್ಯಕ್ಕೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಸಮರ್ಥನೆ ಮಾಡಿಕೊಂಡಿದ್ದಾರೆ.
10 ದಿನಗಳಲ್ಲಿ 4ನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ (Petrol Diesel Price Hike) ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ವ್ಯಾಟ್ ಕಡಿಮೆ ಮಾಡದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬೇಡ. ವ್ಯಾಟ್ ಕಡಿಮೆ ಮಾಡಿದರೆ ದೆಹಲಿ, ಗುಜರಾತ್ ದರಕ್ಕೆ ಪೆಟ್ರೋಲ್, ಡೀಸೆಲ್ ಸಿಗುತ್ತದೆ. ಸಿದ್ದರಾಮಯ್ಯ ತೈಲ ದರ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎರಡೇ ವಾರದಲ್ಲಿ 4ನೇ ಬಾರಿಗೆ ತೈಲ ಶಾಕ್ – ಮತ್ತೆ ಪೆಟ್ರೋಲ್, ಡೀಸೆಲ್ ದರ ತಲಾ 2 ರೂ. ಏರಿಕೆ
ಹಲವು ದೇಶಗಳು ತೈಲ ಬಳಕೆಯ ವಿಚಾರದಲ್ಲಿ ನಿರ್ಬಂಧ ವಿಧಿಸಿವೆ. ಆದರೆ ಇಲ್ಲಿ ಮೋದಿಯವರು (PM Modi) ಹಾಗೆ ಮಾಡಿಲ್ಲ. ಸಿದ್ದರಾಮಯ್ಯನವರು ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ. ನಾಚಿಕೆ ಆಗಬೇಕು ಇವರಿಗೆ. ಗುಜರಾತ್, ಹರಿಯಾಣ, ದೆಹಲಿಯಲ್ಲಿ ಪೆಟ್ರೋಲ್ ದರ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ವ್ಯಾಟ್ ಹೆಚ್ಚು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತೈಲದ ಮೇಲಿನ ವ್ಯಾಟ್‌ನಿಂದ ರಾಜ್ಯಕ್ಕೆ 6 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಅದರ ದರ ಇಳಿಸಲಿ. ಸಿದ್ದರಾಮಯ್ಯ, ಸುರ್ಜೇವಾಲ ಕಡಿದು ಕಟ್ಟೆ ಹಾಕುತ್ತೇವೆ. ಬಾಗಿಲು ಹಾಕುತ್ತೇವೆ ಅಂದರೆ ಆಗಲ್ಲ. ತಾಕತ್ ಇದ್ದರೆ ರಾಜ್ಯ ಸರ್ಕಾರ ವ್ಯಾಟ್ ಇಳಿಸಲಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ದೇಶದ ಜನರಿಗೆ ಬೆಳ್ಳಂಬೆಳಗ್ಗೆ ತೈಲ ಶಾಕ್ – ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ದರ ಏರಿಕೆ ಹೇಗಿದೆ?
ಯುದ್ಧದ ಪರಿಣಾಮ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಸಾಮಾನ್ಯ ದಿನಗಳು, ಯುದ್ಧದ ದಿನಗಳು ಒಂದೇ ಅಲ್ಲ. ಕಾಂಗ್ರೆಸ್‌ನವರಿಗೆ ಈ ಕಾಮನ್ ಸೆನ್ಸ್ ಇಲ್ಲ. ಕಾಂಗ್ರೆಸ್ ಹಾಗೂ ಕಾಕ್ರೋಚ್ ಪಕ್ಷಗಳು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿವೆ. ಇವೆರಡು ಪಕ್ಷಗಳು ಪಾಕಿಸ್ತಾನದ ಟೂಲ್ ಕಿಟ್, ದೇಶವಿಭಜನೆಯ ಟೂಲ್ ಕಿಟ್, ದೇಶದ್ರೋಹದ ಟೂಲ್ ಕಿಟ್ ಎಂದು ಕಿಡಿಕಾರಿದ್ದಾರೆ.
ತೈಲ ಬೆಲೆ ಏರಿಕೆ ಹಿನ್ನೆಲೆ ಮೇ 30ಕ್ಕೆ ಕಾಂಗ್ರೆಸ್‌ನವರು ಹೋರಾಟ ಮಾಡುತ್ತಾರಂತೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರದ್ದು ಬೋಗಸ್ ಹೋರಾಟ, ಜನರಿಗೆ ಟೋಪಿ ಹಾಕುವ ಹೋರಾಟ ಎಂದಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲೇ ಅಧಿವೇಶನ; 2-3 ದಿನಕ್ಕೊಮ್ಮೆ ಇಂಧನ ದರ ಏರಿಕೆ ಯಾಕೆ? – ಹೆಚ್.ಕೆ. ಪಾಟೀಲ್ ಆಕ್ರೋಶ
ಡಿಕೆಶಿಗೆ ತನ್ನ ಭವಿಷ್ಯಾನೇ ಗೊತ್ತಿಲ್ಲ
2028ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, 2028 ಕ್ಕೆ ತಾವೇ ಇರೋದಾಗಿ ಡಿಕೆಶಿ ಭವಿಷ್ಯ ನುಡಿದಿದ್ದಾರೆ. ಅವರಿಗೆ ಸ್ವತಃ ತನ್ನ ಭವಿಷ್ಯವನ್ನೇ ಹೇಳುವುದಕ್ಕಾಗಿಲ್ಲ. ಆಗ ಕಾಂಗ್ರೆಸ್‌ನಲ್ಲೇ ಇರುತ್ತಾರೋ ಬೇರೆ ಪಕ್ಷಕ್ಕೆ ಹೋಗುತ್ತಾರೋ ಯಾರಿಗೆ ಗೊತ್ತು ಎಂದು ವ್ಯಂಗವಾಡಿದ್ದಾರೆ.
ಡಿಕೆಶಿ ಕೈಗೆ ಚಿಪ್ಪು ಕೊಡುತ್ತಾರೆ
ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ಬುಲಾವ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಒಬ್ಬರನ್ನೇ ಹೈಕಮಾಂಡ್ ಕರೆದಿರುವುದು. ಆದರೆ ಸಿದ್ದರಾಮಯ್ಯ ಒಬ್ಬರೇ ದೆಹಲಿಗೆ ಹೋಗುತ್ತಿಲ್ಲ. ಸಿಎಂ ತಮ್ಮ ಪಟಾಲಂ ಕರೆದುಕೊಂಡು ಹೋಗುತ್ತಿದ್ದಾರೆ. ಡಿಕೆಶಿ ಕೈಗೆ ಚಿಪ್ಪು ಕೊಡುತ್ತಾರೆ. 136 ಸೀಟ್ ಬರುವುದಾಗಿ ಭವಿಷ್ಯ ಹೇಳಿದ್ದೆ ಅಂತ ಪದೇ ಪದೇ ಹೇಳುತ್ತಿದ್ದಾರೆ. ಆದರೆ ಅವರಿಗೆ ತಮ್ಮ ಭವಿಷ್ಯವನ್ನೇ ಹೇಳುವುದಕ್ಕಾಗಿಲ್ಲ. ಕಾಂಗ್ರೆಸ್‌ನಲ್ಲಿ ಯಾರು ಸಿಎಂ ಅಂತ ಇನ್ನೂ ತೀರ್ಮಾನ ಆಗಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನ ಖಾಲಿ ಮಾಡುವಂತೆ ಕಾಣುತ್ತಿಲ್ಲ. ಡಿಕೆಶಿಗೆ ಖಾಲಿ ತಟ್ಟೆ ಕೊಡೋ ಥರ ಕಾಣುತ್ತಿದೆ. ಸಿದ್ದರಾಮಯ್ಯ ಅವರೇ ಸಿಎಂ ಅಂತ ತೀರ್ಮಾನ ಆದರೆ ಇನ್ನೂ 60 ಸಾವಿರ ಕೋಟಿಯಷ್ಟು ತೆರಿಗೆ ವಿಧಿಸಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ ಇದು ಸಿದ್ದರಾಮಯ್ಯ ಅವರ ಟ್ಯಾಕ್ಸ್ ಅವತಾರ ಎಂದು ಲೇವಡಿ ಮಾಡಿದ್ದಾರೆ.
ಭಟ್ಕಳದ ಘರ್ಷಣೆ ಪ್ರಕರಣದ ಬಗ್ಗೆ ಮಾತನಾಡಿ, ಮೊನ್ನೆ ಆಳಂದದ ದರ್ಗಾ ಕೇಸ್‌ಗಳನ್ನ ಹಿಂಪಡೆದರು. ಅದರ ಬೆನ್ನಲ್ಲೇ ಭಟ್ಕಳದಲ್ಲಿ ಮುಸ್ಲಿಂ ಮತಾಂಧರು ಗಲಭೆ ನಡೆಸಿದ್ದಾರೆ. ಏಕಾಏಕಿ ಅಲ್ಲಿನ ಮುಸ್ಲಿಂ ಭಯೋತ್ಪಾದಕರು ಮುರೀನ್ ಕಟ್ಟೆ ಒಡೆದು ಹಾಕಿದ್ದಾರೆ. ಅವರೆಲ್ಲ ಕುಕ್ಕರ್ ಬ್ರದರ್ಸ್ ಸಂತತಿಯವರು. ಪೊಲೀಸರು ಕೈಕಟ್ಟಿ ನಿಂತುಕೊಂಡಿದ್ದರು. ಯಾರ ಬಂಧನ ಆಗಿಲ್ಲ, ಕೇಸ್ ಹಾಕಿಲ್ಲ. ಅವರಿಗೆ ನಾವೇನೇ ಮಾಡಿದರೂ ಸಿದ್ದರಾಮಯ್ಯ ಕೇಸ್ ವಾಪಸ್ ಪಡೆಯುತ್ತಾರೆ ಅನ್ನೋ ಭ್ರಮೆಯಿದೆ. ಹೀಗಾಗಿ ಮತ್ತಷ್ಟು ಗಲಭೆ ಮಾಡುತ್ತಿದ್ದಾರೆ. ಈ ಗಲಭೆಗೆ ಸರ್ಕಾರದ ಮುಸ್ಲಿಂ ತುಷ್ಟೀಕರಣವೇ ಕಾರಣ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಆಗಬೇಕು. ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
