ಕೆಲ ದಿನಗಳಿಂದ ಶಾಂತವಾಗಿದ್ದ ಪಂಜಾಬ್ ಇದೀಗ ಮತ್ತೆ ಸುದ್ದಿಯಲ್ಲಿದೆ. ಪಂಜಾಬ್ ನ ಜಲಂಧರ್ ಮತ್ತು ಅಮೃತಸರದಲ್ಲಿ ಸರಣಿ ಸ್ಫೋಟ ನಡೆದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿವೆ. ಜಲಂಧರ್ ನ ಬಿಎಸ್ಎಫ್ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಪೋಟ ನಡೆದಿದ್ದು, ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ. ಸದ್ಯ ಈ ಎರಡು ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಎನ್ಐಎ ತನಿಖೆಗೆ ನೀಡಲಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಹೊರ ಬರಬೇಕಿದೆ. ಇದೇ ಮೊದಲ ಇದಕ್ಕೂ ಮುನ್ನ ಹಲವು ಸ್ಫೋಟಗಳು ನಡೆದಿದ್ದವು. ಆ ಸಮಯದಲ್ಲಿ ಏನಾಗಿತ್ತು? ಎಲ್ಲದರ ಕುರಿತು ಮಾಹಿತಿ ಇಲ್ಲಿದೆ.
ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಪ್ರಮುಖ ನಗರಗಳಲ್ಲಿ ನಡೆದ ಈ ದಾಳಿಗಳು ಕೇವಲ ಕಾಕತಾಳೀಯವಲ್ಲ, ಬದಲಿಗೆ ವ್ಯವಸ್ಥಿತ ಸಂಚು ಎಂಬುದು ತನಿಖೆಯಿಂದ ತಿಳಿದುಬರುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಪಂಜಾಬ್‌ನಲ್ಲಿ ಪದೇ ಪದೇ ನಡೆಯುತ್ತಿರುವ ಇಂತಹ ಸಣ್ಣ ಪ್ರಮಾಣದ ಸ್ಫೋಟಗಳು ಮತ್ತು ಗಡಿ ಭಾಗದ ಅಶಾಂತಿ, ರಾಜ್ಯದಲ್ಲಿ ಭಯೋತ್ಪಾದಕ ಜಾಲಗಳು ಮತ್ತೆ ಸಕ್ರಿಯವಾಗುತ್ತಿವೆಯೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿವೆ.
2026ರ ಮೇ 5 ಮಂಗಳವಾರ ರಾತ್ರಿ 10:50ರ ಸುಮಾರಿಗೆ ಅಮೃತಸರದ ಖಾಸ್ಸಾ ಕಂಟೋನ್ಮೆಂಟ್ ಮತ್ತು ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆ (Jalandhar BSF) ಪ್ರಧಾನ ಕಚೇರಿಯ ಹೊರಗೆ ಭಾರೀ ಸ್ಫೋಟಗಳು ಸಂಭವಿಸಿವೆ.
ಜಲಂಧರ್ ಸ್ಫೋಟ:
ಜಲಂಧರ್‌ನ BSF ಚೌಕ್ ಬಳಿ ಇರುವ BSF ಪಂಜಾಬ್ ಫ್ರಾಂಟಿಯರ್ ಪ್ರಧಾನ ಕಚೇರಿಯ ಹೊರಗೆ ರಾತ್ರಿ ಸುಮಾರು 8 ಗಂಟೆಗೆ ಮೊದಲ ಸ್ಫೋಟ ಸಂಭವಿಸಿತು.ಬಾಂಬ್ ಸ್ಫೋಟದಿಂದಾಗಿ ಸ್ಕೂಟರ್ ಬೆಂಕಿ ತಗುಲಿ, ಅದರಲ್ಲಿನ ಪೆಟ್ರೋಲ್ ಟ್ಯಾಂಕ್ (Petrol Tank) ಸ್ಫೋಟಗೊಂಡಿದೆ ಎಂದು ಪೊಲೀಸರು ಆರಂಭದಲ್ಲಿ ಹೇಳಿದ್ದರು. ಬಳಿಕ ಎರಡೂ ಕಡೆ ಉಂಟಾದ ಸ್ಫೋಟಗಳಲ್ಲಿ IED (ಸುಧಾರಿತ ಸ್ಫೋಟಕ ಸಾಧನ) ಬಳಕೆ ಮಾಡಿರುವುದು ಕಂಡುಬಂದಿದೆ.
ಅಮೃತಸರ ಸ್ಫೋಟ:
ಜಲಂಧರ್‌ನಲ್ಲಿ ಬಾಂಬ್ ಸ್ಫೋಟ ನಡೆದ ಕೆಲವೇ ಗಂಟೆಗಳಲ್ಲಿ ಅಮೃತಸರದ ಖಾಸಾ ಮಿಲಿಟರಿ ಕ್ಯಾಂಪ್ ಬಳಿಯ ಗೋಡೆಯ ಸಮೀಪ ಮತ್ತೊಂದು ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಆದರೆ ಗೋಡೆಯ ಮೇಲಿದ್ದ ತಗಡಿನ ಶೀಟ್ ಹಾನಿಗೊಳಗಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಆದಿತ್ಯ ಎಸ್. ವಾರಿಯರ್, ಶಂಕಿತ ಸ್ಫೋಟದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹಿರಿಯ ಅಧಿಕಾರಿಗಳು ಕಂಟೋನ್ಮೆಂಟ್ ಪ್ರದೇಶದಲ್ಲಿ ಬೀಡುಬಿಟ್ಟಿರುವ ಸೇನಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.
ಮೊದಲಿಗೆ ರಾತ್ರಿ 10:50 ರ ಸುಮಾರಿಗೆ ಅಮೃತ್‌ಸರದ ಖಾಸ್ಸಾ ಕಂಟೋನ್ಮೆಂಟ್ ಬಳಿ ಸ್ಫೋಟದ ಶಬ್ಧ ಕೇಳಿಬಂದಿರುವುದಾಗಿ ಪೊಲೀಸರಿಗೆ ದೂರು ಬಂದಿತು. ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸೇನಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತಲುಪಿದ್ರು. ಸದ್ಯ ಎಫ್‌ಎಸ್‌ಎಲ್ ಸಂಗ್ರಹಿಸಿರುವ ಸಾಕ್ಷ್ಯಗಳನ್ನ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಫೋಟಕ ಹೇಗೆ ಸಂಭವಿಸಿತು? ಮತ್ತು ಇದಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಸದ್ಯ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಮತ್ತು ಪಂಜಾಬ್ ಪೊಲೀಸರಿಗೆ ವಹಿಸಲಾಗಿದೆ. ಅಲ್ಲದೇ ಈ ಎಲ್ಲಾ ಘಟನೆಗಳ ಹಿಂದೆ ಪಾಕಿಸ್ತಾನದ ISI ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಂಜಾಬ್‌ನಲ್ಲಿ ಅಶಾಂತಿ ಮೂಡಿಸಲು ಈ ರೀತಿಯ ಹೈಬ್ರಿಡ್ ಭಯೋತ್ಪಾದನಾ ಜಾಲಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ. ಇನ್ನೂ ಈ ಘಟನೆಯ ಹಿನ್ನೆಲೆ ರಾಜ್ಯದಾದ್ಯಂತ ಮತ್ತು ಗಡಿ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಎರಡು ಪ್ರಕರಣಗಳ ಹಿಂದೆ ಯಾರಿದ್ದಾರೆ?
ಜಲಂಧರ್ ಹಾಗೂ ಅಮೃತಸರದಲ್ಲಿ ನಡೆದ ಎರಡು ಸರಣಿ ಸ್ಫೋಟಗಳ ಜವಾಬ್ದಾರಿಯನ್ನು ಖಲಿಸ್ತಾನ್ ಲಿಬರೇಶನ್ ಆರ್ಮಿ (KLA) ಎಂಬ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಫೆಬ್ರವರಿಯಲ್ಲಿ ನಡೆದಿದ್ದ ರಂಜಿತ್ ಸಿಂಗ್ ಎಂಬಾತನ ಪೊಲೀಸ್ ಎನ್‌ಕೌಂಟರ್ ಸೇಡಿಗಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಪಂಜಾಬ್ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ತನಿಖಾ ಸಂಸ್ಥೆಗಳು ಜಲಂಧರ್ ಮತ್ತು ಅಮೃತಸರದಲ್ಲಿ ನಡೆದ ಸ್ಫೋಟದ ಸ್ಥಳದ ಸುತ್ತಮುತ್ತಲಿನ ಸುಮಾರು 720ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿವೆ. ಜಲಂಧರ್‌ನಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಸ್ಫೋಟಕವನ್ನಿಟ್ಟು ವ್ಯಕ್ತಿಯೊಬ್ಬ ಪರಾರಿಯಾಗುತ್ತಿರುವುದು ಕಂಡುಬಂದಿದೆ.
ಇನ್ನೂ ಈಗಾಗಲೇ ಅಮೃತಸರದ ಖಾಸಾ ಮಿಲಿಟರಿ ಕ್ಯಾಂಪ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಸುಮಾರು 120 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ಭಾಗವಾಗಿ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪುರಾವೆಗಳನ್ನು ಸಂಗ್ರಹಿಸಿದ್ದಾರೆ.
ಮೇ 9ರಂದು ಬಾಂಬ್ ಇರಿಸಿದ್ದ ಶಂಕಿತನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಈತ ಸ್ಫೋಟಕ್ಕೂ ಮುನ್ನ ಎರಡು ದಿನಗಳ ಕಾಲ ಆ ಪ್ರದೇಶದ ಪರಿಶೀಲನೆ ನಡೆಸಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಜೊತೆಗೆ ವಿಧಿವಿಜ್ಞಾನ ವರದಿಯ ಪ್ರಕಾರ, ಸ್ಫೋಟಕ್ಕೆ ಸುಧಾರಿತ ಸಾಧನಗಳನ್ನು (IED) ಬಳಸಲಾಗಿತ್ತು. ಇವುಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ಅಥವಾ ಸಮಯ ನಿಗದಿಪಡಿಸಿ (ಟೈಮರ್) ಸ್ಫೋಟಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.
‘ಆಪರೇಷನ್ ಸಿಂಧೂರʼದ ನಂಟು:
ಅಮೃತಸರ ಹಾಗೂ ಜಲಂಧರ್ ಸ್ಫೋಟಕ್ಕೆ ಆಪರೇಷನ್ ಸಿಂಧೂರದ ಲಿಂಕ್ ಇದೆ ಎನ್ನಲಾಗಿದೆ. ಆಪರೇಷನ್ ಸಿಂಧೂರ ನಡೆದು ಒಂದು ವರ್ಷ ಆಗುವ ಹೊತ್ತಿನಲ್ಲೇ ಈ ಸ್ಫೋಟ ನಡೆದಿದೆ. ಪಂಜಾಬ್‌ನಲ್ಲಿ ಅಶಾಂತಿ ಮೂಡಿಸಲು ಐಎಸ್ಐ ಈ ದಿನವನ್ನೇ ಆರಿಸಿಕೊಂಡಿರಬಹುದು ಎಂದು ತನಿಖಾ ಸಂಸ್ಥೆ ಶಂಕೆ ವ್ಯಕ್ತಪಡಿಸಿವೆ.
ಈ ಘಟನೆಯು ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (AAP) ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಈ ಸರಣಿ ಸ್ಫೋಟಗಳ ಹಿಂದೆ ಚುನಾವಣಾ ರಾಜಕೀಯದ ಪಿತೂರಿ ಇರಬಹುದು ಎಂದು ಶಂಕಿಸಿದ್ದಾರೆ. ಜೊತೆಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಸರ್ಕಾರವನ್ನು ಟೀಕಿಸುತ್ತಿವೆ. ಕೇವಲ 10 ದಿನಗಳಲ್ಲಿ ಮೂರು ಬಾರಿ ಸ್ಫೋಟಕ್ಕೆ ಯತ್ನಿಸಿರುವುದು ಈ ವಾದಕ್ಕೆ ಪುಷ್ಟಿ ನೀಡಿದೆ. ಈ ಸಂಬಂಧ ವಿಪಕ್ಷ ನಾಯಕರು ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ನೋಟಿಸ್ ಜಾರಿ ಮಾಡಿದ್ದರು.
ಘಟನೆಯ ನಂತರ ಪಂಜಾಬ್‌ನಾದ್ಯಂತ ಹೈ ಅಲರ್ಟ್ ಘೋಷಿಸಿರುವುದರಿಂದ ಸಾರ್ವಜನಿಕ ಸಂಚಾರ ಮತ್ತು ಜನಜೀವನದ ಮೇಲೆ ಪರಿಣಾಮ ಬೀರಿದೆ. ಜನರು ಶಾಂತಿ ಕಾಪಾಡುವಂತೆ ಮತ್ತು ವದಂತಿಗಳಿಗೆ ಕಿವಿಗೊಡದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇನ್ನೂಸ್ಫೋಟಕ್ಕೆ ಡೆಲಿವರಿ ಬಾಯ್ ಒಬ್ಬನ ಸ್ಕೂಟರ್ ಬಳಸಲಾಗಿತ್ತು ಎಂಬ ಸುದ್ದಿ ಹರಡುತ್ತಿದ್ದಂತೆ, ಜಲಂಧರ್ ಮತ್ತು ಅಮೃತಸರದಲ್ಲಿ ಕೊರಿಯರ್ ಮತ್ತು ಫುಡ್ ಡೆಲಿವರಿ ಸಿಬ್ಬಂದಿಗಳನ್ನು ಜನರು ಸಂಶಯದಿಂದ ನೋಡುವಂತಾಗಿದೆ. ಇದು ಸ್ಥಳೀಯ ಸಣ್ಣ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ.
ಇದಕ್ಕೂ ಮುನ್ನ ಪಂಜಾಬ್‌ನ ಪ್ರಮುಖ ನಗರಗಳಲ್ಲಿ ಇದೇ ರೀತಿ ಸ್ಫೋಟ ಹಾಗೂ ಬಾಂಬ್ ಸ್ಫೋಟಿಸಲು ಸಂಚು ನಡೆದಿತ್ತು. 2026ರ ಫೆಬ್ರವರಿಯಲ್ಲಿ ಇಂಡೋ-ಪಾಕ್ ಗಡಿಯ ಸಮೀಪದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಇದರ ನಂತರ ನಡೆದ ಎನ್ಕೌಂಟರ್‌ನಲ್ಲಿ ಆರೋಪಿಯನ್ನು ಹತ್ಯೆ ಮಾಡಲಾಗಿತ್ತು. ಇದೇ ಸೇಡಿನಿಂದಾಗಿ ನಮೇ 5ರಂದು ಪಂಜಾಬ್ ಮತ್ತು ಅಮೃತಸರದಲ್ಲಿ ಎರಡು ಕಡೆ ಸರಣಿ ಸ್ಫೋಟ ನಡೆದಿದೆ ಎನ್ನಲಾಗಿದೆ.
2026ರ ಮಾರ್ಚ್‌ನಲ್ಲಿ ಅಮೃತಸರ ಜಿಲ್ಲೆಯ ಭಿಂದಿ ಸೈದಾನ್ ಪೊಲೀಸ್ ಠಾಣೆಯ ಹೊರಗೆ ಗ್ರೆನೇಡ್ ದಾಳಿ ನಡೆದಿತ್ತು. ಅದೃಷ್ಟವಶಾತ್ ಇದರಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

