ಅಹಮದಾಬಾದ್: ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ಫೈನಲ್ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಗಂಭೀರವಾಗಿ ಉಲ್ಲಂಘಿಸಿದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ (Tim David) ಅವರಿಗೆ ಮುಂದಿನ ಸೀಸನ್‌ನ ಒಂದು ಪಂದ್ಯಕ್ಕೆ ನಿಷೇಧ ಹೇರಿ ಐಪಿಎಲ್ ಶಿಸ್ತು ಸಮಿತಿ ಆದೇಶಿಸಿದೆ.
ಗುಜರಾತ್ ಟೈಟನ್ಸ್ (GT) ವಿರುದ್ಧದ ಫೈನಲ್ ಪಂದ್ಯದ 10ನೇ ಓವರ್‌ನಲ್ಲಿ ವಿಕೆಟ್ ಪತನದ ಬಳಿಕ ಟಿಮ್ ಡೇವಿಡ್ ಅವರು ಮೈದಾನದ ಅಂಪೈರ್ ನಿತಿನ್ ಮೆನನ್ ಅವರತ್ತ ಐಸ್ ಬ್ಯಾಗ್ ಎಸೆದಿದ್ದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಉಲ್ಲಂಘನೆ (ಮೈದಾನದಲ್ಲಿ ಅಂಪೈರ್ ಅಥವಾ ಆಟಗಾರರ ಮೇಲೆ ಯಾವುದೇ ವಸ್ತುಗಳನ್ನು ಎಸೆಯುವುದು ಅಪರಾಧ) ಆಗಿರುವುದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ನಿಷೇಧ ಜೊತೆ ಪಂದ್ಯದ ಸಂಭಾವನೆಯಲ್ಲಿ 50% ರಷ್ಟು ದಂಡ ಕೂಡ ಹಾಕಲಾಗಿದೆ.
ಈ ತಪ್ಪಿಗಾಗಿ ಅವರಿಗೆ 2 ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಈ ಸೀಸನ್‌ನಲ್ಲಿ ಇದು ಅವರ 3ನೇ ತಪ್ಪು ಹಾಗೂ ಒಟ್ಟು ಡಿಮೆರಿಟ್ ಅಂಕಗಳು 5ಕ್ಕೆ ತಲುಪಿದ ಕಾರಣ ನಿಯಮಾವಳಿಗಳ ಪ್ರಕಾರ ಸ್ವಯಂಚಾಲಿತವಾಗಿ ಒಂದು ಪಂದ್ಯದ ನಿಷೇಧ ಹೇರಲಾಗಿದೆ.
ನಿಷೇಧದ ಅನ್ವಯ ಟಿಮ್ ಡೇವಿಡ್ ಅವರು ಐಪಿಎಲ್ 2027 ರ ಮೊದಲ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಮುಂದಿನ ಸೀಸನ್‌ನಲ್ಲಿ ಅವರು ಆರ್‌ಸಿಬಿ ಪರ ಆಡಿದರೂ ಅಥವಾ ಬೇರೆ ಯಾವುದೇ ಫ್ರಾಂಚೈಸಿ ಪರ ಆಡಿದರೂ ಆ ತಂಡದ ಮೊದಲ ಪಂದ್ಯಕ್ಕೆ ಈ ನಿಷೇಧ ಅನ್ವಯಿಸುತ್ತದೆ. ಇದನ್ನೂ ಓದಿ: ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್‌ಗೆ ಐಸ್ ಕ್ಯೂಬ್ ಸುರಿದು ಸಂಭ್ರಮಿಸಿದ ಸಾಲ್ಟ್, ಡೇವಿಡ್

ಮೊದಲ ತಪ್ಪು – ಅಂಪೈರ್ ಆದೇಶ ಉಲ್ಲಂಘನೆ
ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 13 ರಂದು ನಡೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ನ 18ನೇ ಹಾಗೂ 20ನೇ ಓವರ್‌ಗಳಲ್ಲಿ ಅಂಪೈರ್‌ಗಳು ಚೆಂಡನ್ನು ಬದಲಾಯಿಸಿದಾಗ, ಟಿಮ್ ಡೇವಿಡ್ ಆ ಚೆಂಡನ್ನು ತಾವೇ ಇಟ್ಟುಕೊಂಡು ಪರೀಕ್ಷಿಸುತ್ತಿದ್ದರು. ಅಂಪೈರ್‌ಗಳು ಪದೇ ಪದೇ ಕೇಳಿದರೂ ಚೆಂಡನ್ನು ಮರಳಿ ನೀಡಲು ನಿರಾಕರಿಸಿದ್ದರು. ಅಂಪೈರ್ ನಿಯಮ ಉಲ್ಲಂಘಿಸಿದ್ದಕ್ಕಾಗಿ (ಆರ್ಟಿಕಲ್ 2.4) ಅವರಿಗೆ ಪಂದ್ಯದ ಸಂಭಾವನೆಯ 25% ರಷ್ಟು ದಂಡ ಮತ್ತು 1 ಡಿಮೆರಿಟ್ ಅಂಕ ನೀಡಲಾಗಿತ್ತು. ಇದನ್ನೂ ಓದಿ: 15 ವರ್ಷಕ್ಕೆ 5 ಪ್ರಶಸ್ತಿ – 45 ಲಕ್ಷ ಕ್ಯಾಶ್ ಜೊತೆ ಸೂರ್ಯವಂಶಿಗೆ ಸಿಕ್ತು ಸಿಯೆರಾ ಕಾರು!
ಎರಡನೇ ತಪ್ಪು – ಅಸಭ್ಯ ವರ್ತನೆ
ಮುಂಬೈ ಇಂಡಿಯನ್ಸ್ ವಿರುದ್ಧ 10 ರಂದು ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತ್ತು. ಗೆದ್ದ ಬಳಿಕ ಡಗೌಟ್‌ನಲ್ಲಿ ಸಂಭ್ರಮಿಸುವಾಗ ಟಿಮ್ ಡೇವಿಡ್ ಅವರು ಮುಂಬೈ ಆಟಗಾರರತ್ತ ಅಸಭ್ಯವಾಗಿ ಮಧ್ಯದ ಬೆರಳು ತೋರಿಸಿ ಸನ್ನೆ ಮಾಡಿದ್ದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್ ಆಗಿತ್ತು.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.6 ರ ಅಡಿಯಲ್ಲಿ ಅಸಭ್ಯ ಸನ್ನೆ ಮಾಡಿದ್ದಕ್ಕಾಗಿ ಅವರಿಗೆ ಪಂದ್ಯದ ಸಂಭಾವನೆಯ 30% ರಷ್ಟು ದಂಡ ಮತ್ತು 2 ಡಿಮೆರಿಟ್ ಅಂಕಗಳನ್ನು ವಿಧಿಸಲಾಗಿತ್ತು
ಈ ಹಿಂದಿನ ಎರಡು ತಪ್ಪುಗಳಿಂದ 3 ಡಿಮೆರಿಟ್ ಅಂಕಗಳು ಬಂದಿದ್ದವು. ಫೈನಲ್ ಪಂದ್ಯದಲ್ಲಿ ಐಸ್ ಬ್ಯಾಗ್ ಎಸೆದಿದ್ದಕ್ಕೆ ಮತ್ತೆ 2 ಅಂಕಗಳು ಸೇರಿ ಒಟ್ಟು 5 ಡಿಮೆರಿಟ್ ಅಂಕಗಳಾದ ಕಾರಣ ಅವರನ್ನು ಮುಂದಿನ ಪಂದ್ಯಕ್ಕೆ ನಿಷೇಧಿಸಲಾಗಿದೆ.
