– BPL ಕಾರ್ಡ್ ದಾರರಿಂದ ಸರ್ಕಾರಕ್ಕೆ ದೋಖಾ?
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುವ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಖರೀದಿಸಿ, ಮರುಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಕೆ.ಪಿ. ಅಗ್ರಹಾರ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾರೆ.
ಕೆ.ಪಿ. ಅಗ್ರಹಾರದ ರಸ್ತೆಯೊಂದರಲ್ಲಿರುವ ಪುಟ್ಟ ಕೋಣೆಯಲ್ಲಿ ಸೆಲ್ವಂ ಎಂಬ ವ್ಯಕ್ತಿ ಬಿಪಿಎಲ್ ಕಾರ್ಡ್‌ದಾರರಿಂದ ಅಕ್ಕಿ ಹಾಗೂ ರಾಗಿ ಖರೀದಿಸಿ, ರೈಸ್ ಟ್ರೇಡರ್ಸ್‌ಗಳಿಗೆ ಮರುಮಾರಾಟ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಪ್ರಕಾರ, ದಾಳಿ ನಡೆದ ದಿನವೇ ಸುಮಾರು 12 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಲಾಗಿತ್ತು.
ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ
ಬೆಂಗಳೂರು ನಗರದ ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪಾತರಾಜ್, ಪಶ್ಚಿಮ ವಲಯದ ಜಂಟಿ ನಿರ್ದೇಶಕಿ ಸವಿತಾ, ದಕ್ಷಿಣ ವಲಯದ ಉಪ ನಿರ್ದೇಶಕ ಕೃಷ್ಣ ಹಾಗೂ ಆಹಾರ ನಿರೀಕ್ಷಕರಾದ ನಾಗೇಂದ್ರ, ಶ್ರೀಧರ್ ಮತ್ತು ರಾಜಯ್ಯ ಅವರ ತಂಡ ದಾಳಿ ನಡೆಸಿ ಸ್ಥಳ ಪರಿಶೀಲನೆ ನಡೆಸಿದೆ.

ದಾಳಿ ವೇಳೆ ಸ್ಥಳದಲ್ಲಿ ತೂಕದ ಯಂತ್ರ, ಪ್ಲಾಸ್ಟಿಕ್ ಚೀಲಗಳು, ಕವರ್‌ಗಳು ಹಾಗೂ ದಾರ ಸೇರಿದಂತೆ ಅಕ್ಕಿ-ರಾಗಿಯ ಪ್ಯಾಕಿಂಗ್‌ಗೆ ಬಳಸುವ ಸಾಮಗ್ರಿಗಳು ಪತ್ತೆಯಾಗಿವೆ. ಈ ಕುರಿತ ಎಕ್ಸ್‌ಕ್ಲೂಸಿವ್ ದೃಶ್ಯಗಳು ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ಘಟನೆ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.
ಅನ್ನಭಾಗ್ಯ ಅಕ್ಕಿ, ರಾಗಿ ಮಾರಾಟ ಆರೋಪ
ಆಹಾರ ಇಲಾಖೆಯ ಬೆಂಗಳೂರು ನಗರದ ಹೆಚ್ಚುವರಿ ನಿರ್ದೇಶಕ ಪಾತರಾಜ್ ಈ ಬಗ್ಗೆ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಮತ್ತು ರಾಗಿಯನ್ನು ವಿತರಿಸಲಾಗುತ್ತಿದ್ದು, ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗಿತ್ತು. ವಿಚಾರಣೆ ನಡೆಸಿದಾಗ, ದಾಳಿ ನಡೆದ ದಿನ ಸುಮಾರು 12 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್‌ದಾರರಿಗೆ ಎಚ್ಚರಿಕೆ
ಇನ್ನೂ ಪಶ್ಚಿಮ ವಲಯದ ಜಂಟಿ ನಿರ್ದೇಶಕಿ ಸವಿತಾ ಮಾತನಾಡಿ, ಸೆಲ್ವಂ ಎಂಬ ವ್ಯಕ್ತಿ ಅಕ್ಕಿ ಮತ್ತು ರಾಗಿಯನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಆರೋಪವಿದೆ. ವಿಚಾರಣೆ ವೇಳೆ ಅಕ್ಕಿ ಮತ್ತು ರಾಗಿ ಮಾರಾಟ ಮಾಡುತ್ತಿದ್ದುದನ್ನು ಆತ ಒಪ್ಪಿಕೊಂಡಿದ್ದಾನೆ. ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲ, ದಾರ ಹಾಗೂ ತೂಕದ ಯಂತ್ರ ಪತ್ತೆಯಾಗಿದೆ. ನ್ಯಾಯಬೆಲೆ ಅಂಗಡಿಯಿಂದ ಅನ್ನಭಾಗ್ಯ ಯೋಜನೆಯಡಿ ಪಡೆದ ಅಕ್ಕಿ ಅಥವಾ ರಾಗಿಯನ್ನು ಮರುಮಾರಾಟ ಮಾಡುವುದು ನಿಯಮ ಉಲ್ಲಂಘನೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಆಹಾರಧಾನ್ಯವನ್ನು ಕುಟುಂಬದ ಬಳಕೆಗಾಗಿ ಮಾತ್ರ ಬಳಸಿಕೊಳ್ಳಬೇಕು. ಬಿಪಿಎಲ್ ಕಾರ್ಡ್‌ದಾರರು ಆಹಾರಧಾನ್ಯವನ್ನು ಮಾರಾಟ ಮಾಡಿರುವುದು ಸಾಬೀತಾದರೆ, ಸಂಬಂಧಪಟ್ಟ ಕಾರ್ಡ್‌ಗಳನ್ನು ಆರು ತಿಂಗಳ ಕಾಲ ಅಮಾನತುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸವಿತಾ ತಿಳಿಸಿದ್ದಾರೆ.

ಇನ್ನಷ್ಟು ಮಾಹಿತಿಗಾಗಿ ತನಿಖೆ
ಕೆ.ಪಿ. ಅಗ್ರಹಾರದಲ್ಲಿ ಅಕ್ಕಿ ಮತ್ತು ರಾಗಿ ಮಾರಾಟ ಮಾಡಿರುವ ಬಿಪಿಎಲ್ ಕುಟುಂಬಗಳ ಮಾಹಿತಿ ಸೇರಿದಂತೆ, ಅಕ್ರಮ ಜಾಲದ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ದೊರೆಯುವ ಆಹಾರಧಾನ್ಯವನ್ನು ಹಣಕ್ಕಾಗಿ ಮರುಮಾರಾಟ ಮಾಡಲಾಗುತ್ತಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

