ಚಾಮರಾಜನಗರ: ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತ ಬಲಿಯಾಗಿದ್ದಾನೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಗ್ರಾಮದ ಬಸವಣ್ಣ (65) ಮೃತಪಟ್ಟವರಾಗಿದ್ದಾರೆ. ಎಂದಿನಂತೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಹುಲಿ ದಾಳಿ ನಡೆಸಿದ್ದು, ಬಸವಣ್ಣ ಅವರನ್ನು ಎಳೆದೊಯ್ದಿದೆ ಎನ್ನಲಾಗಿದೆ.
ಹುಲಿ ಅವರ ದೇಹದ ಅರ್ಧ ಭಾಗವನ್ನು ತಿಂದು, ಬಳಿಕ ಸಮೀಪದಲ್ಲಿದ್ದ ಕಬ್ಬಿನ ತೋಟದೊಳಕ್ಕೆ ಎಳೆದೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಂಜೆಯಾದರೂ ಬಸವಣ್ಣ ಅವರು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಜಮೀನಿಗೆ ತೆರಳಿ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಬಂದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಡಗಲಪುರ ಗ್ರಾಮದಲ್ಲಿ ಹಿಂದೆ ಹುಲಿಯು ದನ ಹಾಗೂ ಮೇಕೆಗಳನ್ನು ಕೊಂದು ಹಾಕಿತ್ತು. ಹುಲಿ ದಾಳಿ ಆತಂಕದ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ಕೂಡ ತಂದಿದ್ದರು. ಹುಲಿ ಸೆರೆ ಹಿಡಿಯೋದು ಬಿಟ್ಟು ಬೋನು ಅಳವಡಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ನಾಟಕವಾಡಿದ್ದರು. ಇದೀಗ ಹುಲಿ ದಾಳಿಯಿಂದ ಒಬ್ಬ ರೈತನ ಸಾವಾಗಿದೆ. ಸಾವಿಗೆ ಅರಣ್ಯ ಇಲಾಖೆಯೇ ಹೊಣೆ ಹೊರಬೇಕು ಅಂತಾ ಆಗ್ರಹಿಸಿದ್ದಾರೆ. ಅಲ್ಲದೇ ಹುಲಿ ಹಿಡಿಯುವ ಕೆಲಸ ಮಾಡಬೇಕು. ಜೊತೆಗೆ ಅರಣ್ಯ ಸಚಿವರು ಬರಬೇಕು ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

