ಚೆನ್ನೈ: ತಮಿಳುನಾಡು (CM Vijay) ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಲಂಡನ್ ಪ್ರವಾಸ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ನಾಲ್ಕು ದಿನಗಳ ಲಂಡನ್ ಭೇಟಿಯಲ್ಲಿ ರಾಜ್ಯಕ್ಕೆ ಹೂಡಿಕೆ ತರಲು ಎಷ್ಟು ಸಭೆಗಳನ್ನು ನಡೆಸಲಾಗಿದೆ? ಇದು ಅಧಿಕೃತ ಹೂಡಿಕೆ ಪ್ರವಾಸವೋ ಅಥವಾ ಪರ್ಸನಲ್ ಟ್ರಿಪ್ಪೋ? ಎಂದು ಬಿಜೆಪಿ ಹಾಗೂ ಎಐಎಡಿಎಂಕೆ ಪ್ರಶ್ನಿಸಿವೆ.
ವಿಜಯ್ ಲಂಡನ್‌ನಲ್ಲಿ ಉದ್ಯಮ ನಾಯಕರನ್ನು ಭೇಟಿಯಾಗಿ ತಮಿಳುನಾಡಿಗೆ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವ ನಿರೀಕ್ಷೆಯಿದೆ. ಆದರೆ, ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ನಡೆದ ನಟ ಅಜಿತ್ ಅವರ ಲೆ ಮ್ಯಾನ್ಸ್ ಕಪ್ ಕಾರ್ಯಕ್ರಮದಲ್ಲಿ ವಿಜಯ್, ನಟಿ ತ್ರಿಷಾ ಹಾಗೂ ಆಧವ್ ಅರ್ಜುನ್ ಕಾಣಿಸಿಕೊಂಡಿದ್ದ ವೀಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಇದರಿಂದ ಅವರ ವಿದೇಶ ಪ್ರವಾಸದ ಉದ್ದೇಶದ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಎತ್ತಿವೆ.
ತ್ರಿಷಾ ಬಗ್ಗೆಯೂ ಪರೋಕ್ಷ ಟೀಕೆ
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಬಿಜೆಪಿ ತಮಿಳುನಾಡು ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ವಿಜಯ್ ಅವರ ಲಂಡನ್ ಪ್ರವಾಸದ ಉದ್ದೇಶ, ಅವರೊಂದಿಗೆ ತೆರಳಿರುವವರು ಯಾರು? ಎಂದು ಪ್ರಶ್ನಿಸುವ ಮೂಲಕ ನಟಿ ತ್ರಿಷಾ ಬಗ್ಗೆಯೂ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 100 ದಿನಗಳಲ್ಲಿ ಹೂಡಿಕೆ ಆಕರ್ಷಿಸಲು ವಿಜಯ್ ವಿದೇಶ ಪ್ರವಾಸ ಕೈಗೊಂಡಿರುವುದನ್ನು ಆರಂಭದಲ್ಲಿ ಸ್ವಾಗತಿಸಿದ್ದಾಗಿ ಪಳನಿಸ್ವಾಮಿ ಹೇಳಿದ್ದಾರೆ. ಇಂತಹ ಪ್ರಯತ್ನಗಳು ರಾಜ್ಯದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಬಹುದು ಎಂದಿದ್ದಾರೆ. ಆದರೆ, ಸಿಲ್ವರ್‌ಸ್ಟೋನ್‌ನ ಫೋಟೋಗಳು ವೈರಲ್ ಆದ ಬಳಿಕ ವಿಜಯ್ ವಿರುದ್ಧ ಪಳನಿಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಾಧ್ಯಮದಲ್ಲಿ ಚಿತ್ರಣ ವಿಭಿನ್ನವಾಗಿದೆ. ಅವರು ಹೂಡಿಕೆಗಳನ್ನು ಹೇಗೆ ಆಕರ್ಷಿಸುತ್ತಿದ್ದಾರೆಂದು ನೋಡಿ ಎಂದು ಟೀಕಿಸಿದ್ದಾರೆ.
ಪ್ರವಾಸದ ಅಧಿಕೃತ ಸ್ಥಿತಿ ಪ್ರಶ್ನಿಸಿದ ಬಿಜೆಪಿ
ವಿಜಯ್ ಅವರ ಲಂಡನ್ ಭೇಟಿ ಅಧಿಕೃತ ಸರ್ಕಾರಿ ಪ್ರವಾಸವೋ ಅಥವಾ ವೈಯಕ್ತಿಕ ಪ್ರವಾಸವೋ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ಯಾರೆಲ್ಲಾ ತೆರಳಿದ್ದಾರೆ ಎಂಬ ಬಗ್ಗೆಯೂ ಅವರು ಸ್ಪಷ್ಟನೆ ಕೇಳಿದ್ದಾರೆ.
ಮುಖ್ಯಮಂತ್ರಿಯವರ ಜೊತೆ ಕೆಲವರು ಪ್ರಯಾಣಿಸಿದ್ದಾರೆ ಎಂಬ ವರದಿಗಳಿವೆ. ಆದರೆ, ಅವರು ಯಾರು ಎಂಬುದು ತಮಗೆ ತಿಳಿದಿಲ್ಲ ಎಂದು ನಾಗೇಂದ್ರನ್ ಹೇಳಿದ್ದಾರೆ. ಪ್ರವಾಸಕ್ಕೆ ಸರ್ಕಾರಿ ಹಣ ಬಳಸಲಾಗಿದೆಯೇ ಮತ್ತು ಹೂಡಿಕೆ ಆಕರ್ಷಿಸುವ ಉದ್ದೇಶದಿಂದಲೇ ವಿಜಯ್ ಲಂಡನ್‌ಗೆ ತೆರಳಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾಲ್ಕು ದಿನಗಳ ಪ್ರವಾಸದಲ್ಲಿ ಮುಖ್ಯಮಂತ್ರಿ ಎಷ್ಟು ಸಭೆಗಳನ್ನು ನಡೆಸಿದ್ದಾರೆ ಹಾಗೂ ಇದುವರೆಗೆ ತಮಿಳುನಾಡಿಗೆ ಎಷ್ಟು ಹೂಡಿಕೆ ಬದ್ಧತೆಗಳು ಬಂದಿವೆ ಎಂಬುದನ್ನು ವಿಜಯ್ ವಾಪಸ್ ಆದ ಬಳಿಕ ಬಹಿರಂಗಪಡಿಸಬೇಕು ಎಂದು ನಾಗೇಂದ್ರನ್ ಹೇಳಿದ್ದಾರೆ. ʻʻಇದು ವೈಯಕ್ತಿಕ ಪ್ರವಾಸವಾಗಿದ್ದರೆ ಹೇಳಲು ಏನೂ ಇಲ್ಲ. ಆದರೆ, ಹೂಡಿಕೆ ಆಕರ್ಷಿಸಲು ಹೋಗಿದ್ದರೆ ಯಾರನ್ನು ಭೇಟಿಯಾದರು ಮತ್ತು ಎಷ್ಟು ಹೂಡಿಕೆ ನಿರೀಕ್ಷಿಸಲಾಗಿದೆ ಎಂಬುದನ್ನು ವಿವರಿಸಬೇಕುʼʼ ಎಂದು ಅವರು ಹೇಳಿದ್ದಾರೆ.
ವಿಜಯ್ ಸರ್ಕಾರದ ವಿರುದ್ಧ ಉದಯನಿಧಿ ವಾಗ್ದಾಳಿ
ಇದೇ ವೇಳೆ ಲಂಡನ್ ಪ್ರವಾಸದ ವಿಚಾರವಾಗಿ ವಿಜಯ್ ಸರ್ಕಾರದ ವಿರುದ್ಧ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕೂಡ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿದಿನ ಹೊಸ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ವಿದ್ಯುತ್ ಕಡಿತ, ವಿದ್ಯುತ್ ಕೊರತೆ ಹಾಗೂ ಕಾನೂನು ಸುವ್ಯವಸ್ಥೆ ವಿಚಾರಗಳನ್ನೂ ಉದಯನಿಧಿ ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆಗಳಿಗೆ ವಿಜಯ್ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಹಬ್ಬದ ಸಂಭ್ರಮ – 14 ಲಕ್ಷದ ಅಮೆರಿಕನ್ ಡೈಮಂಡ್‌ನಲ್ಲಿ ಮಿಂಚಿದ ಗಣಪ!
ನಿಯೋಗದ ಬಗ್ಗೆ ಡಿಎಂಕೆ ಪ್ರಶ್ನೆ
ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್ ಕೂಡ ವಿಜಯ್ ಅವರ ಲಂಡನ್ ನಿಯೋಗದ ಸಂಯೋಜನೆ ಬಗ್ಗೆ ಪ್ರಶ್ನಿಸಿದ್ದಾರೆ. ಕೈಗಾರಿಕಾ ಸಚಿವರು ಅಥವಾ ಇಲಾಖೆಯ ಕಾರ್ಯದರ್ಶಿ ಮುಖ್ಯಮಂತ್ರಿಯವರ ಜೊತೆ ತೆರಳಿಲ್ಲ ಎಂದು ಅವರು ಹೇಳಿದ್ದಾರೆ.
“ಅವರ ಔಪಚಾರಿಕ ವೇಳಾಪಟ್ಟಿಯನ್ನು ಘೋಷಿಸಲಾಗಿಲ್ಲ. ಅವರು ಸರ್ಕಾರಕ್ಕೆ ಹೊರತಾದ ತಮ್ಮ ಸ್ನೇಹಿತರೊಬ್ಬರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ” ಎಂದು ಎಳಂಗೋವನ್ ಆರೋಪಿಸಿದ್ದಾರೆ.
ಈ ಪ್ರವಾಸದಿಂದ ತಮಿಳುನಾಡಿಗೆ ಹೂಡಿಕೆಗಳು ಬರುವುದಿಲ್ಲ ಎಂದು ಅವರು ಆರೋಪಿಸಿದ್ದು, ರಾಜ್ಯದ ಅಭಿವೃದ್ಧಿ ಬಗ್ಗೆ ವಿಜಯ್ ಅವರಿಗೆ ಆಸಕ್ತಿ ಇಲ್ಲ ಎಂದು ಟೀಕಿಸಿದ್ದಾರೆ.ಇದನ್ನೂ ಓದಿ: ಉಡುಪಿ ಜಿಲ್ಲೆಯ ವಿವಿಧೆಡೆ ಭಕ್ತಿ-ಭಾವದಿಂದ ಗಣೇಶ ಚತುರ್ಥಿ ಆಚರಣೆ

