ಉಡುಪಿ: ಗಣೇಶ ಚತುರ್ಥಿ (Ganesh Chaturthi) ಹಬ್ಬದ ಹಿನ್ನೆಲೆಯಲ್ಲಿ ಉಡುಪಿ (Udupi) ಜಿಲ್ಲೆಯಾದ್ಯಂತ ಭಕ್ತಿ-ಭಾವದ ವಾತಾವರಣ ನಿರ್ಮಾಣವಾಗಿದ್ದು, ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹವನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಭಕ್ತರ ದಂಡೇ ಹರಿದುಬಂದಿತು. ಶ್ರೀ ವಿನಾಯಕನಿಗೆ ವಿಶೇಷ ಪೂಜೆ, ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ದೂರದ ಊರುಗಳಿಂದ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ಗಣಪತಿಯ ದರ್ಶನ ಪಡೆದರು. ಗಣೇಶ ಚೌತಿ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಸೇರಿದಂತೆ ಅನೇಕ ಗಣ್ಯರು ಶ್ರೀ ವಿನಾಯಕನ ದರ್ಶನ ಪಡೆದರು. ಇದನ್ನೂ ಓದಿ: ಬೆಂಗಳೂರಲ್ಲಿ ಹಬ್ಬದ ಸಂಭ್ರಮ – 14 ಲಕ್ಷದ ಅಮೆರಿಕನ್ ಡೈಮಂಡ್‌ನಲ್ಲಿ ಮಿಂಚಿದ ಗಣಪ!
ಭಕ್ತರ ಹೆಚ್ಚಿನ ಸಂಖ್ಯೆಯ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ವಿಶೇಷ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸರತಿ ಸಾಲಿನ ನಿರ್ವಹಣೆ, ಕುಡಿಯುವ ನೀರು ಹಾಗೂ ಇತರ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿತ್ತು.
ಶ್ರೀಕೃಷ್ಣ ಮಠದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ
ಬಾದ್ರಪದ ಶುಕ್ಲ ಗಣೇಶ ಚತುರ್ಥಿಯ ಪರ್ವಕಾಲದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ಗಣೇಶ ವಿಗ್ರಹವನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಲಾಯಿತು. ಸಾಂಪ್ರದಾಯಿಕವಾಗಿ ಗಣೇಶ ವಿಗ್ರಹವನ್ನು ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ತರಲಾಯಿತು. ನಂತರ ಮಠದ ಪುರೋಹಿತರಾದ ಸುದರ್ಶನ ಭಟ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ಪರ್ಯಾಯ ಪೀಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಗಣೇಶ ವಿಗ್ರಹಕ್ಕೆ ಮಹಾಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನ ಡಾ. ಉದಯ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು, ರಾಮಚಂದ್ರ ಕೊಡಂಚ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ – ವಿಷ್ಣು ಅವತಾರದಲ್ಲಿ ಜನಮನ ಸೆಳೆದ ಗಣಪತಿ
ಪರಿಸರ ಸ್ನೇಹಿ ಪಂಚ ಹಸಿರೆಲೆ ಗಣಪ ವಿಶೇಷ ಆಕರ್ಷಣೆ
ಉಡುಪಿ ನಗರದ ಮಾರುತಿ ವೀಥಿಕದಲ್ಲಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಪರಿಸರ ಸ್ನೇಹಿ ‘ಪಂಚ ಹಸಿರೆಲೆ ಗಣಪ’ ಭಕ್ತರ ಗಮನ ಸೆಳೆಯುತ್ತಿದೆ. ಮಾವಿನ ಎಲೆ, ವೀಳ್ಯದೆಲೆ, ಎಕ್ಕದ ಎಲೆ, ಬಾಳೆ ಎಲೆ ಹಾಗೂ ಹಲಸಿನ ಎಲೆ ಸೇರಿದಂತೆ ಪೂಜಾ ಕಾರ್ಯಗಳಲ್ಲಿ ಬಳಸುವ ಐದು ಬಗೆಯ ಹಸಿರೆಲೆಗಳನ್ನು ಆಧರಿಸಿ ವಿಶಿಷ್ಟ ಗಣಪತಿ ವಿಗ್ರಹವನ್ನು ರೂಪಿಸಲಾಗಿದೆ. ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಈ ವಿಭಿನ್ನ ಗಣೇಶ ವಿಗ್ರಹವು ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.

