ಕೊಪ್ಪಳ/ಕಲಬುರಗಿ: ಶೌಚಾಲಯದ ಸಮಸ್ಯೆಯನ್ನು ಹೇಳಿಕೊಂಡ ಮಹಿಳೆಯರಿಗೆ ಇದು ಶಾಸಕನ ಕೆಲಸವಲ್ಲ, ನೀವೇ ಮಾಡಿಕೊಳ್ಳಬೇಕು. ಪಿಡಿಓಗೆ ಹೇಳ್ತೇನೆ, ಗೃಹಲಕ್ಷ್ಮಿ ಬರುತ್ತಿದೆ ತಾನೇ ಎಂದು ಪ್ರಶ್ನಿಸಿ ಬಾಯಿ ಮುಚ್ಚಿಸಿದ ಪ್ರಸಂಗ ನಡೆದಿದೆ.
ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಹಿಳೆಯರು ತಮ್ಮ ಸಮಸ್ಯೆ ಹೇಳಿದ್ದಾರೆ. ಇದಕ್ಕೆ ರಾಯರೆಡ್ಡಿ ಮುಂದೆ ಕುಳಿತಿದ್ದ ಮಹಿಳೆಯನ್ನು ಕರೆದು “ನೀನೇ ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲು” ಎಂದು ಹೇಳಿದ್ದಾರೆ. ಇದಕ್ಕೆ ಮಹಿಳೆ,”ನಮಗ್ಯಾಕೆ ಬೇಕು” ಎಂದು ಮರುಪ್ರಶ್ನೆ ಹಾಕಿದ್ದಕ್ಕೆ ಸಮಸ್ಯೆಯನ್ನು ಸರಿ ಮಾಡಿಕೊಡುತ್ತೇನೆ ಎಂದು ಹೇಳಿ ಭರವಸೆ ನೀಡಿದರು.
ಈ ಮಧ್ಯೆ, ಕಲಬುರಗಿ (Kalaburagi) ಉತ್ತರ ಮತಕ್ಷೇತ್ರದಲ್ಲಿ ನೀರುಪೂರೈಕೆ ಮಾತು ಕೊಟ್ಟು ಈಡೇರಿಸದ ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ ಬೇಗಂ ಮನೆ ಮುಂದೆ ಜನ ಪ್ರತಿಭಟನೆ ಮಾಡಿದ್ದು, ಮುತ್ತಿಗೆ ಯತ್ನ ನಡೆಸಿದ್ದಾರೆ. ಶಾಸಕಿ ಫಾತಿಮಾ ಮಗನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಾಗ್ವಾದ ಬಳಿಕ ಪೊಲೀಸರು ತಿಳಿಸಿಗೊಳಿಸಿದ್ದಾರೆ.
ನೀರು ಕೊಟ್ಟೇ ಕೊಡ್ತೇವೆ ಅಂತ ಶಾಸಕಿ ಹೇಳಿದ್ದಕ್ಕೆ ಜನ ವಾಪಸ್ ಹೋಗಿದ್ದಾರೆ. ಇತ್ತ, ಹಾಸನದ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಶಾಸಕ ಎ.ಮಂಜು ಅಧ್ಯಕ್ಷತೆಯಲ್ಲಿ ನಡೆದ ಪ್ರಜಾ ಸೇವಾ ಆಂದೋಲನದಲ್ಲಿ ಯುವಕನೋರ್ವ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಅಳಲು ತೋಡಿಕೊಂಡಿದ್ದು, ಶಾಸಕರೇ ಅಚ್ಚರಿಗೊಂಡಿದ್ದಾರೆ.

ಆಲದಹಳ್ಳಿ ಗ್ರಾಮದ ಸಂತೋಷ್ ನಾನು ಎಂಬಿಎ ಓದಿದ್ದೇನೆ. ಆದರೆ, ರೈತನ ಮಗ ಎನ್ನುವ ಕಾರಣಕ್ಕೆ ಯಾರೂ ಮದುವೆಗೆ ಒಪ್ಪುತ್ತಿಲ್ಲ. ಮನೆ ಇದೆ, ಆಸ್ತಿ ಇದೆ, ದಿನದ ದುಡಿಮೆಗೆ ಅಂಗಡಿ ಇದೆ ಆದರೂ ಹುಡುಗಿ ಸಿಗುತ್ತಿಲ್ಲ. ಈಗಾಗಲೇ 30 ಕ್ಕೂ ಹೆಚ್ಚು ಯುವತಿಯರನ್ನು ನೋಡಿದರೂ ಯಾರೊಬ್ಬರೂ ಓಕೆ ಮಾಡ್ತಿಲ್ಲ ಅಂದಿದ್ದಾರೆ. ಈ ವೇಳೆ, ಶಾಸಕರು ನೀನೇ ಯಾರನ್ನಾದ್ರು ಲವ್ ಮಾಡಿ ಮದುವೆಯಾಗು ಎಂದು ಸಲಹೆ ಕೊಟ್ಟಿದ್ದಾರೆ.

