– ಯತೀಂದ್ರ ಮೆರಿಟ್ ಕೋಟಾದಲ್ಲಲ್ಲ, ಅಪ್ಪನ ಕೋಟಾದಲ್ಲಿ ಮಂತ್ರಿಯಾಗಿದ್ದು ಅಂತ ಮಾಜಿ ಸಂಸದ ಟಾಂಗ್
ಮೈಸೂರು: ಕರ್ನಾಟಕದ ರಾಜಕೀಯ ಹೊಲಸು ಮಾಡಿದ್ದೇ ಸಿದ್ದರಾಮಯ್ಯ (Siddaramaiah) ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಮಗನನ್ನು ಮಂತ್ರಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಆ ಭಾಗದ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದರು. ಮೈಸೂರು ಭಾಗದಲ್ಲಿ ಮಗನನ್ನು ಲೀಡರ್ ಮಾಡಲು ಸಿದ್ದರಾಮಯ್ಯ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದ್ದಾರೆ. ಡಾ. ಮಹದೇವಪ್ಪ, ಕೆ.ವೆಂಕಟೇಶ್ ಎಲ್ಲರನ್ನು ಸಿದ್ದರಾಮಯ್ಯ ಮೂಲೆ ಗುಂಪು ಮಾಡಿದ್ದಾರೆ. ಸಭ್ಯ ರಾಜಕಾರಣಿ ತನ್ವೀರ್ ಸೇಠ್‌ಗೆ ಅವಕಾಶ ತಪ್ಪಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಲ್ಲಿಕೆ
ದಲಿತರ ಧ್ವನಿ ಆಗಿರುವ ಮಹದೇವಪ್ಪರ ಸ್ನೇಹವನ್ನೆ ಸಿದ್ದರಾಮಯ್ಯ ಮರೆತು ಬಿಟ್ಟರು. ತನ್ನ ಮಗನ ಮೇಲೆ ಮಾತ್ರ ಕಿರೀಟ ಇರಬೇಕು ಅಂತಾ ಎಲ್ಲಾ ನಾಯಕರ ರಾಜಕೀಯ ಮುಗಿಸಿದ್ದಾರೆ. ಮಹದೇವಪ್ಪ, ವೆಂಕಟೇಶ್, ಸಿದ್ದರಾಮಯ್ಯಗೆ ಸದಾ ಜೊತೆ ಇದ್ದರು. ಸ್ನೇಹಿತರ ರಾಜಕೀಯವನ್ನೆ ಸಿದ್ದರಾಮಯ್ಯ ಮುಗಿಸಿದರು. ಭ್ರಷ್ಟಾಚಾರ ಮಾಡಿ 14 ಸೈಟ್ ಪಡೆದು ಭ್ರಷ್ಟಾಚಾರ ಬಗ್ಗೆ ಮಾತಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದು ಕೊಂಡಿದ್ದರು. ಈಗ ಮಗನಿಗಾಗಿ ಎಲ್ಲರ ರಾಜಕೀಯ ಮುಗಿಸಿ ಕುಟುಂಬ ರಾಜಕೀಯದ ಬಗ್ಗೆ ಟೀಕೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಟಾಂಗ್ ಕೊಟ್ಟರು.
ಸಂಪುಟದಲ್ಲಿ ಒಬ್ಬ ಮಹಿಳೆಯರು ಇಲ್ಲ. ಕಾಂಗ್ರೆಸ್ ಮಹಿಳಾ ವಿರೋಧಿ. ಲಕ್ಷ್ಮಿ ಹೆಬ್ಬಾಳ್ಕರ್, ಗಾಯತ್ರಿ ಶಾಂತೇಗೌಡ ಇಬ್ಬರು ಮಂತ್ರಿ ಆಗುವುದಕ್ಕೆ ಕಲ್ಲು ಹಾಕಿದವರು ಸಿದ್ದರಾಮಯ್ಯ. ಕರ್ನಾಟಕದ ರಾಜಕೀಯ ಹೊಲಸು ಮಾಡಿದ್ದೇ ಸಿದ್ದರಾಮಯ್ಯ. ರಾಜಕೀಯ ಹಾಳು ಮಾಡಿ ಈಗ ರಾಜಕೀಯ ಹೊಲಸಾಗಿದೆ ಅಂತಾ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ. ಯತೀಂದ್ರ ಸಿದ್ದರಾಮಯ್ಯ ಮೆರಿಟ್ ಕೋಟಾದಲ್ಲಿ ಮಂತ್ರಿ ಆಗಿಲ್ಲ. ಅಪ್ಪನ ಕೋಟಾದಲ್ಲಿ ಮಂತ್ರಿ ಅಷ್ಟೆ. ಮೆರಿಟ್ ಇಲ್ಲದ ಯತೀಂದ್ರ ಈ ಭಾಗದಲ್ಲಿ ಲೀಡರ್ ಆಗಲ್ಲ ಅನ್ನೋ ಕಾರಣಕ್ಕೆ ಮಹದೇವಪ್ಪರಂತಹ ದಲಿತರ ಧ್ವನಿಯನ್ನು ಸಿದ್ದರಾಮಯ್ಯ ಕುಗ್ಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನಗೆ ಸಚಿವ ಸ್ಥಾನ ನೀಡಲೇಬೇಕು, ಅದನ್ನು ಬಿಟ್ಟು ಬೇರೆ ಮಾತುಕತೆ ಇಲ್ಲ: ಕೃಷ್ಣಪ್ಪ ಖಡಕ್ ಮಾತು
ಹಿಂದೂ ರಾಷ್ಟ್ರ ವಿಚಾರವಾಗಿ ಮಾತನಾಡಿ, ಯಾರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ. ಇದು ಸ್ವಾಭಾವಿಕವಾಗಿ ಹಿಂದೂ ರಾಷ್ಟ್ರ. ಯತೀಂದ್ರ ಅಪ್ಪನದು ಮೊದಲಿಂದಲೂ ಇದೇ ಪಾಲಿಟಿಕ್ಸ್. ಯತೀಂದ್ರ ಅವರೆ ನಿಮಗೆ ಮಂತ್ರಿ ಸ್ಥಾನ ಸಿಕ್ಕಿದು ಇದೇ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ. ನಿಮ್ಮದು ಜಾತಿ ಕೋಟಾ. ಅಪ್ಪನ ಕೋಟಾ ನೆನಪಿರಲಿ ಎಂದು ಚಾಟಿ ಬೀಸಿದರು.



